


ಡೈಲಿವಾರ್ತೆ:05/ಸೆ./2026

ಮಾಬುಕಳ: ಓವರ್‌ಟೇಕ್ ಮಾಡಿ ಏಕಾಏಕಿ ಬಸ್ ನಿಲ್ಲಿಸಿದ ಚಾಲಕ – ಬಸ್‌ಡಿಗೆ ಬಿದ್ದು ಸ್ಕೂಟಿ ಸವಾರ ದಾರುಣ ಸಾವು

ಕೋಟ, ಸೆ. 5: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ರವಿರಾಜ್ ಮೃತಪಟ್ಟಿದ್ದು, ಹಿಂಬದಿ ಸವಾರ ಅನಿಲ್ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕಿನ ಬಾಳ್ಕುದ್ರು ಗ್ರಾಮದ ಮಾಬುಕಳ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

ಪೊಲೀಸ್ ಮಾಹಿತಿಯ ಪ್ರಕಾರ ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಬೆಳಿಗ್ಗೆ ಸುಮಾರು 9.05ರ ವೇಳೆಗೆ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸುತ್ತಿದ್ದು
ಮಾಬುಕಳ ಬಸ್ ನಿಲ್ದಾಣದ ಬಳಿ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಿದ ಬಸ್ ಚಾಲಕ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ ನಿಲ್ಲಿಸಿದ್ದಾನೆ.
ಈ ಸಂದರ್ಭ ಸ್ಕೂಟಿಯನ್ನು ಚಲಾಯಿಸಿಕೊಂಡು ಬರುತ್ತಿದ್ದ ರವಿರಾಜ್, ನಿಯಂತ್ರಣ ತಪ್ಪಿ ಬಸ್‌ನ ಹಿಂಭಾಗದ ಬಲಬದಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಮೇತ ಬಸ್‌ನಡಿಗೆ ಬಿದ್ದ ಪರಿಣಾಮ ರವಿರಾಜ್ ಗಂಭೀರವಾಗಿ ಗಾಯಗೊಂಡರು. ಸ್ಕೂಟಿಯ ಹಿಂಬದಿ ಸವಾರ ಅನಿಲ್ ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.
ತಕ್ಷಣ ಇಬ್ಬರನ್ನೂ ಚಿಕಿತ್ಸೆಗಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ರವಿರಾಜ್ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗಾಯಾಳು ಅನಿಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಬಸ್ ಚಾಲಕನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 139/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 281, 125(ಬಿ) ಹಾಗೂ 106ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.