


ಡೈಲಿವಾರ್ತೆ:06/ಸೆ./2026

ಕುಂದಾಪುರ: ಸುಜ್ಞಾನ ಅಂಗಳದಲ್ಲಿ ಮುದ್ದುಕೃಷ್ಣ ಸ್ಪರ್ಧೆ: ಮೊಬೈಲ್-ಟಿವಿಯ ಬಂಧನಕ್ಕೆ ಮಕ್ಕಳನ್ನು ಸಿಲುಕಿಸಬೇಡಿ; ಸಂಸ್ಕೃತಿ-ಪ್ರಕೃತಿಯೊಂದಿಗೆ ಬೆಳೆಸಿರಿ: ಸಂಯುಕ್ತ ಹೊರನಾಡು


ಕುಂದಾಪುರ: ಮಕ್ಕಳ ಬಾಲ್ಯವನ್ನು ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಗೆ ಸೀಮಿತಗೊಳಿಸದೆ, ಪ್ರಕೃತಿ, ತಾಯಿಭಾಷೆ, ಕಲೆ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಬೆರೆಯುವ ವಾತಾವರಣವನ್ನು ಪೋಷಕರು ಕಲ್ಪಿಸಿಕೊಡಬೇಕು ಎಂದು ಚಲನಚಿತ್ರ ನಟಿ ಹಾಗೂ ನಿರ್ದೇಶಕಿ ಸಂಯುಕ್ತ ಹೊರನಾಡು ಹೇಳಿದರು.
ಸುಜ್ಞಾನ ಪದವಿಪೂರ್ವ ಕಾಲೇಜು ಕುಂದಾಪುರ, ಸುಜ್ಞಾನ ನ್ಯಾಷನಲ್ ಪದವಿಪೂರ್ವ ಕಾಲೇಜು ಬಾರ್ಕೂರು, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ ವತಿಯಿಂದ ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಕುಂದಾಪುರ (ರಿ.) ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡ ಸಂಯುಕ್ತ ಹೊರನಾಡು, ಬಾಲ್ಯದಲ್ಲಿ ಪ್ರಕೃತಿ, ಭಾಷೆ ಹಾಗೂ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆತು ಬೆಳೆಯುವುದರಿಂದ ಸ್ವತಂತ್ರವಾಗಿ ಯೋಚಿಸುವ ಶಕ್ತಿ ದೊರೆಯುತ್ತದೆ ಎಂದರು. ಮಕ್ಕಳ ಸಂಪೂರ್ಣ ಬಾಲ್ಯವೇ ಪರದೆಯ ಮುಂದೆ ಕಳೆಯದಂತೆ ಪೋಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಮೂಲಗಳ ಅರಿವು ಮಕ್ಕಳ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ. ಶಿಕ್ಷಣದ ಜತೆಗೆ ಸಂಗೀತ, ನೃತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಕೇವಲ ಹಣ ಮತ್ತು ಯಶಸ್ಸಿನ ಹಿಂದೆ ಓಡುವುದಕ್ಕಿಂತ ಸಮಾಜದ ಮೇಲೆ ಉತ್ತಮ ಪ್ರಭಾವ ಬೀರುವ ವ್ಯಕ್ತಿತ್ವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀಕೃಷ್ಣನ ಜೀವನವು ಪ್ರಕೃತಿ, ಪ್ರಾಣಿ-ಪಕ್ಷಿಗಳು ಹಾಗೂ ಜನಜೀವನದೊಂದಿಗೆ ಬೆಸೆದುಕೊಂಡಿದ್ದು, ಮಾನವೀಯತೆ ಮತ್ತು ಪ್ರಕೃತಿ ಪ್ರೇಮದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದರು.
ಸಂಸ್ಕೃತಿ-ಸಂಸ್ಕಾರವೂ ಶಿಕ್ಷಣದ ಭಾಗ: ಡಾ. ರಮೇಶ್ ಶೆಟ್ಟಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ ಶಿಕ್ಷಣ ಎಂದರೆ ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೇಕು ಎಂದರು.
ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳ ಬಗ್ಗೆ ಹೊಸ ತಲೆಮಾರಿಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುದ್ದುಕೃಷ್ಣ ಸ್ಪರ್ಧೆಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವೇದಿಕೆ ಧೈರ್ಯ, ಆತ್ಮವಿಶ್ವಾಸ ಹಾಗೂ ಸಾಂಸ್ಕೃತಿಕ ಅರಿವನ್ನು ಬೆಳೆಸುತ್ತವೆ ಎಂದು ಹೇಳಿದರು.
ಸಂಸ್ಥೆಯು ಶಿಕ್ಷಣದೊಂದಿಗೆ ಕ್ರೀಡೆ, ಕಲೆ, ಸಂಸ್ಕೃತಿ, ಬೇಸಿಗೆ ಶಿಬಿರ ಸೇರಿದಂತೆ ವಿವಿಧ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ ಎಂದರು.
ನಾಲ್ಕನೇ ವರ್ಷದ ಮುದ್ದುಕೃಷ್ಣ ಸಂಭ್ರಮ: ಪ್ರತಾಪ್ ಚಂದ್ರ ಶೆಟ್ಟಿ

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನೂ ಹೊಂದಿವೆ ಎಂದರು.
ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಲಾಗುತ್ತಿರುವ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರತಿವರ್ಷ ನೂರಾರು ಮಕ್ಕಳು ಭಾಗವಹಿಸುತ್ತಿದ್ದು, ಪುಟ್ಟ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಕಾಣಿಸಿಕೊಳ್ಳುವ ದೃಶ್ಯ ಪೋಷಕರು ಮತ್ತು ಸಾರ್ವಜನಿಕರಿಗೆ ವಿಶೇಷ ಸಂತಸ ನೀಡುತ್ತದೆ ಎಂದು ಹೇಳಿದರು.
ಪಠ್ಯದ ಜತೆಗೆ ಸಂಸ್ಕೃತಿ, ಸಂಸ್ಕಾರವೂ ಅಗತ್ಯ: ಭರತ್ ಶೆಟ್ಟಿ

ಸುಜ್ಞಾನ ವಿದ್ಯಾ ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಶಿಕ್ಷಣವು ಕೇವಲ ಪಠ್ಯಪುಸ್ತಕ, ಅಂಕ ಮತ್ತು ಪರೀಕ್ಷೆಗಳಿಗೆ ಸೀಮಿತವಾಗಬಾರದು. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯ ಹಾಗೂ ನಮ್ಮ ಆಚಾರ-ವಿಚಾರಗಳ ಅರಿವು ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಕರ್ತವ್ಯ ಎಂದರು.
ಸಂಸ್ಥೆಯು ಉಚಿತ ಶಿಕ್ಷಣ ಯೋಜನೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೂ ಸಮಾನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಮುದ್ದುಕೃಷ್ಣ ಸ್ಪರ್ಧೆಯು ಕೇವಲ ವೇಷಭೂಷಣ ಸ್ಪರ್ಧೆಯಲ್ಲ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ವಾನ್ ಕೆ. ಭವಾನಿ ಶಂಕರ್, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಸುಜ್ಞಾನ ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ, ಉಪಪ್ರಾಂಶುಪಾಲೆ ಸ್ಫೂರ್ತಿ, ವಿದುಷಿ ವಿದ್ಯಾ ಸಂದೇಶ್, ಸಂಗೀತ ಶಿಕ್ಷಕಿ ಮೀನಾ ಕಾರಂತ್ ಸಾಸ್ತಾನ ಉಪಸ್ಥಿತರಿದ್ದರು.






ಸುಜ್ಞಾನ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸಂಸ್ಥೆಯ ಮುಖ್ಯೋಪಾಧ್ಯಾಯ ಪ್ರದೀಪ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.
ನೂರಾರು ಪುಟಾಣಿಗಳು ಶ್ರೀಕೃಷ್ಣ ಹಾಗೂ ರಾಧೆಯರ ಆಕರ್ಷಕ ವೇಷಭೂಷಣದಲ್ಲಿ ಭಾಗವಹಿಸಿ ಮುದ್ದುಕೃಷ್ಣ ಸ್ಪರ್ಧೆಗೆ ವಿಶೇಷ ಮೆರಗು ತಂದರು.