


ಡೈಲಿವಾರ್ತೆ:08/ಸೆ./2026

ಕೋರ್ದಬ್ಬು ದೈವಸ್ಥಾನದಲ್ಲಿ 36 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಕಿಲ್ಪಾಡಿಯ ಕೋರ್ದಬ್ಬು ದೈವಸ್ಥಾನದಲ್ಲಿ ನಡೆದ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳ್ಳತನ ಪ್ರಕರಣವನ್ನು ಮೂಲ್ಕಿ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳತನದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತರನ್ನು ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಜಾಹಿದ್ ಸಿನಾನ್, ಕಾರ್ಕಳದ ನಿಟ್ಟೆ ನಿವಾಸಿಯಾಗಿದ್ದು ಪ್ರಸ್ತುತ ಕಾರ್ನಾಡ್ ಸಮೀಪ ವಾಸವಾಗಿರುವ ಯಾಸಿನ್, ದಾವಣಗೆರೆ ನಿವಾಸಿಗಳಾದ ಅಬ್ದುಲ್ ಜುಮಾಲ್ ಹಾಗೂ ಮಹಮ್ಮದ್ ಆಫ್ರಿದ್ ಎಂದು ಗುರುತಿಸಲಾಗಿದೆ.
ದೈವಸ್ಥಾನದಲ್ಲಿ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡ ಆರೋಪಿಗಳು ಪೂರ್ವನಿಯೋಜಿತವಾಗಿ ಕಳ್ಳತನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದೈವಸ್ಥಾನದಲ್ಲಿದ್ದ ಕಡಸಾಲೆ ಸೇರಿದಂತೆ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದ್ದು, ಕಳುವಾಗಿರುವ ಆಭರಣಗಳ ಒಟ್ಟು ಮೌಲ್ಯ ಸುಮಾರು 36 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಬೆಲೆಬಾಳುವ ದೈವದ ಆಭರಣಗಳ ಕಳ್ಳತನ ಪ್ರಕರಣ ಸ್ಥಳೀಯವಾಗಿ ತೀವ್ರ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಕೆಲಕಾಲ ಬಿಗುವಿನ ವಾತಾವರಣವೂ ನಿರ್ಮಾಣವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೂಲ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.