


ಡೈಲಿವಾರ್ತೆ:08/ಸೆ./2026

ಅಪಘಾತದಲ್ಲಿ ಗಾಯಗೊಂಡ ಚಿರತೆ ರಕ್ಷಣೆ ವೇಳೆ ಸಿಬ್ಬಂದಿ ಮೇಲೆ ದಾಳಿ:ಅರಣ್ಯ ಇಲಾಖೆಯ ಸಿಬ್ಬಂದಿಗೆ ಗಾಯ!

ದಾವಣಗೆರೆ: ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡು ರಸ್ತೆ ಪಕ್ಕದ ಚರಂಡಿಯಲ್ಲಿ ನರಳಾಡುತ್ತಿದ್ದ ಚಿರತೆಯನ್ನು ರಕ್ಷಿಸಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಅನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ.
ರಾತ್ರಿ ಸುಮಾರು 11 ಗಂಟೆ ವೇಳೆಗೆ ಚಿರತೆಯೊಂದು ರಸ್ತೆ ದಾಟುತ್ತಿದ್ದ ಸಂದರ್ಭ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಚಿರತೆ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದು ನರಳಾಡುತ್ತಿತ್ತು.
ಚಿರತೆಯ ಸ್ಥಿತಿಯನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಚಿಕಿತ್ಸೆ ನೀಡುವ ಉದ್ದೇಶದಿಂದ ಗಾಯಗೊಂಡ ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.
ಈ ವೇಳೆ ಆತಂಕಗೊಂಡ ಚಿರತೆ ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆಯ ಹೋಮ್‌ಗಾರ್ಡ್ ಒಬ್ಬರ ಕೈಗೆ ಗಾಯವಾಗಿದೆ. ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬಳಿಕ ಹೊಸಪೇಟೆಯಿಂದ ಆಗಮಿಸಿದ ವನ್ಯಜೀವಿ ಪಶುವೈದ್ಯರ ತಂಡ ಚಿರತೆಗೆ ಅರವಳಿಕೆ ಮದ್ದು ನೀಡಿದೆ. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಳಸಿ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಯಗೊಂಡಿರುವ ಚಿರತೆಯನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಆರೈಕೆಗಾಗಿ ಶಿವಮೊಗ್ಗದ ತ್ಯಾವರೆಕೊಪ್ಪ ವನ್ಯಜೀವಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.