ಡೈಲಿವಾರ್ತೆ:13/ಅ./2026

ಸುಳ್ಯದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರ ದಾರುಣ ಸಾವು; ಬಾಲಕ ಗಂಭೀರ: ಮೀನು ಹಿಡಿಯಲು ತೆರಳಿದ್ದವರ ಪಾಲಿಗೆ ಮಾರಕವಾದ ಅಕ್ರಮ ವಿದ್ಯುತ್ ಸಂಪರ್ಕ; ತೋಟದ ಮಾಲಕನ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಮೀನು ಹಿಡಿಯಲು ತೆರಳಿದ್ದ ಇಬ್ಬರು ವ್ಯಕ್ತಿಗಳು ತೋಡಿನ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದು, ಅವರೊಂದಿಗೆ ತೆರಳಿದ್ದ ಅಪ್ರಾಪ್ತ ಬಾಲಕ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿ ಸೋಮವಾರ (ಅ.12) ಸಂಭವಿಸಿದೆ.

ಕಲ್ಮಡ್ಕ ಗ್ರಾಮದ ಹೊಳೆಕ್ಕೆರೆ ಪ್ರದೇಶದಲ್ಲಿ ನಡೆದ ಈ ಘಟನೆಯು, ತೋಟಕ್ಕೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಜೀವಕ್ಕೆ ಕಂಟಕವಾದ ದಾರುಣ ಪ್ರಕರಣವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಕಲ್ಮಡ್ಕ ನಿವಾಸಿ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಅಪ್ರಾಪ್ತ ಬಾಲಕನಿಗೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೀನು ಹಿಡಿಯುತ್ತಿದ್ದಾಗಲೇ ಎರಗಿದ ವಿದ್ಯುತ್ ಆಘಾತ:
ಅ.12ರಂದು ತಡರಾತ್ರಿ ಭರತ್ ಮತ್ತು ರಮೇಶ್ ಅವರು ಅಪ್ರಾಪ್ತ ಬಾಲಕನೊಂದಿಗೆ ಕಲ್ಮಡ್ಕ ಗ್ರಾಮದ ಹೊಳೆಕ್ಕೆರೆ ಪ್ರದೇಶದ ತೋಡಿನಲ್ಲಿ ಮೀನು ಹಿಡಿಯುತ್ತಾ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ತೋಡಿನ ಸಮೀಪದಲ್ಲಿದ್ದ ಮಧುಸೂದನ್ ಭಟ್ ಅವರಿಗೆ ಸೇರಿದ ಅಡಿಕೆ ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ತಂತಿಗಳನ್ನು ಅಳವಡಿಸಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ತೋಟಕ್ಕೆ ಎಳೆಯಲಾಗಿದ್ದ ವಿದ್ಯುತ್ ತಂತಿಗಳಿಂದ ತೋಡಿನ ನೀರಿಗೂ ವಿದ್ಯುತ್ ಪ್ರವಹಿಸಿದ್ದು, ನೀರಿನಲ್ಲಿದ್ದ ಭರತ್ ಮತ್ತು ರಮೇಶ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರೊಂದಿಗೆ ಇದ್ದ ಅಪ್ರಾಪ್ತ ಬಾಲಕನಿಗೂ ವಿದ್ಯುತ್ ಸ್ಪರ್ಶಿಸಿ ಗಾಯಗಳಾಗಿವೆ.

ಘಟನೆಯ ತೀವ್ರತೆಯನ್ನು ಅರಿತ ಬಾಲಕ ತಕ್ಷಣ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಿದ್ಯುತ್ ಆಘಾತದಿಂದ ಅಸ್ವಸ್ಥಗೊಂಡಿದ್ದ ಭರತ್ ಮತ್ತು ರಮೇಶ್ ಅವರನ್ನು ಕೂಡಲೇ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಗಾಯಗೊಂಡ ಬಾಲಕನನ್ನು ಅದೇ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ತೋಟದ ಮಾಲಕನ ವಿರುದ್ಧ ಪ್ರಕರಣ ದಾಖಲು:
ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಅಳವಡಿಸಿದ ಆರೋಪದ ಹಿನ್ನೆಲೆಯಲ್ಲಿ ತೋಟದ ಮಾಲಕ ಮಧುಸೂದನ್ ಭಟ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.