




ಡೈಲಿವಾರ್ತೆ:13/ಅ./2026

ಗಂಗೊಳ್ಳಿ: ಮಗುವಾದ ಬಳಿಕ ಪತ್ನಿಯಿಂದ ದೂರವಾದ ಪತಿ, ಸಂಧಾನ ಸಭೆಯಲ್ಲೂ ಅವಮಾನ – ಮನನೊಂದು ಫಿನೈಲ್ ಸೇವಿಸಿದ ನವವಿವಾಹಿತೆ!

ಗಂಗೊಳ್ಳಿ: ಪತಿ ಹಾಗೂ ಆತನ ಸಂಬಂಧಿಕರಿಂದ ನಿರಂತರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರೆನ್ನಲಾದ ಮಹಿಳೆಯೊಬ್ಬರು, ಸಂಸಾರ ಮುಂದುವರಿಸುವ ವಿಚಾರವಾಗಿ ನಡೆದ ಸಂಧಾನ ಸಭೆಯಲ್ಲೂ ಪತಿಯಿಂದ ಅವಮಾನಕರ ಮಾತುಗಳನ್ನು ಎದುರಿಸಿದ ಬಳಿಕ ಮನನೊಂದು ತವರು ಮನೆಯಲ್ಲಿ ಫಿನೈಲ್ ಸೇವಿಸಿ ಅಸ್ವಸ್ಥಗೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಪತಿ ಸೇರಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಲೂರು ಗ್ರಾಮದ ಕಳಿಯ ಚಂದ್ರಯ್ಯ ಆಚಾರ್ಯ ಅವರ ಪುತ್ರಿ ಜಯಶ್ರೀ ಅವರು 2024ರ ನವೆಂಬರ್ 17ರಂದು ದೇವಲ್ಕುಂದದ ಸಾಗರ್ ಪ್ಯಾಲೇಸ್ ಹಾಲ್‌ನಲ್ಲಿ ಪ್ರಕಾಶ್ ಆಚಾರ್ಯ ಎಂಬವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯ ಬಳಿಕ ಅಮಾಸೆಬೈಲಿನ ತಪ್ಲು ಎಂಬಲ್ಲಿರುವ ಪತಿಯ ಮನೆಗೆ ತೆರಳಿದ್ದರು.
ಮಕ್ಕಳಾದರೆ ನೋಡಿಕೊಳ್ಳುವುದಿಲ್ಲವೆಂದು ಕಿರುಕುಳದ ಆರೋಪ:
ಜಯಶ್ರೀ ಅವರ ಆರೋಪದ ಪ್ರಕಾರ, ಪತಿಯ ಅಣ್ಣ ಪ್ರಭಾಕರ ಹಾಗೂ ತಂಗಿ ಪ್ರಶಾಂತಿ ಅವರು ನಿನಗೆ ಮಕ್ಕಳಾದರೆ ಪ್ರಕಾಶ್ ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ನೋಡಿಕೊಳ್ಳುವುದಿಲ್ಲ ಎಂದು ಪದೇಪದೇ ಹೇಳಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಅವರು ತವರು ಮನೆಗೆ ಕರೆ ಮಾಡಿದಾಗ ಮೊಬೈಲ್ ಕಸಿದುಕೊಂಡು ಪರಿಶೀಲಿಸುವುದರ ಜತೆಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
2025ರ ಡಿಸೆಂಬರ್‌ನಲ್ಲಿ ಜಯಶ್ರೀ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಪತಿ ಪ್ರಕಾಶ್ ಆಚಾರ್ಯ ಅವರು ಕಳೆದ ಆರು ತಿಂಗಳಿಂದ ಪತ್ನಿಯನ್ನು ನೋಡಲು ಬಾರದೆ ದೂರ ಉಳಿದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಧಾನ ಸಭೆಯಲ್ಲೂ ಅವಮಾನ?
2026ರ ಅಕ್ಟೋಬರ್ 11ರಂದು ಉಭಯ ಕುಟುಂಬದವರು ಸೇರಿ ಜಯಶ್ರೀ ಮತ್ತು ಪ್ರಕಾಶ್ ಅವರ ಸಂಸಾರದ ವಿಚಾರವಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಕಾಶ್ ಅವರು ಜಯಶ್ರೀಯೊಂದಿಗೆ ಸಂಸಾರ ನಡೆಸುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಲ್ಲದೆ ನೀನು ಮತ್ತು ನಿನ್ನ ಮಗು ಎಲ್ಲಿ ಬೇಕಾದರೂ ಹೋಗಿ ಸಾಯಿರಿ ಎಂದು ಹೇಳಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪತಿಯ ಈ ಮಾತುಗಳಿಂದ ತೀವ್ರವಾಗಿ ಮನನೊಂದ ಜಯಶ್ರೀ ಅವರು ಅಂದೇ ಆಲೂರಿನ ಕಳಿಯಲ್ಲಿರುವ ತಮ್ಮ ತವರು ಮನೆಯಲ್ಲಿ ಫಿನೈಲ್ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:
ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 85, 352, 351 ಹಾಗೂ 3(5)ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.