




ಡೈಲಿವಾರ್ತೆ:14/ಅ./2026

ಶ್ರೀ ಕ್ಷೇತ್ರ ಕಳಿಬೈಲ್ನಲ್ಲಿ ನವರಾತ್ರಿ ಉತ್ಸವದ ಸಂಭ್ರಮ
ಕ್ಷೇತ್ರದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಅಗತ್ಯ: ರಾಘವೇಂದ್ರ ಕುಂದರ್

ಕೋಟ/ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಘಟಿತ ಪ್ರಯತ್ನ ಹಾಗೂ ಪರಸ್ಪರ ಸಹಕಾರ ಅಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ರಾಘವೇಂದ್ರ ಕುಂದರ್ ಹೇಳಿದರು.
ಬ್ರಹ್ಮಾವರ ತಾಲೂಕಿನ ಸಾಸ್ತಾನದ ಪಾಂಡೇಶ್ವರದಲ್ಲಿರುವ ಶ್ರೀ ಕ್ಷೇತ್ರ ಕಳಿಬೈಲು ತುಳಿಸಿ ಅಮ್ಮ ಪರಿವಾರ ಹಾಗೂ ಕೊರಗಜ್ಜ ಸಾನಿಧ್ಯ ಕ್ಷೇತ್ರದಲ್ಲಿ ಅ. 13ರಂದು ನಡೆದ ಮೂರನೇ ದಿನದ ಶರನ್ನವರಾತ್ರಿ ಉತ್ಸವದ ಭಜನಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಸಂಘಟನೆಗಳ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಹಲವು ವರ್ಷಗಳಿಂದ ಗಮನಿಸುತ್ತಿದ್ದರೂ, ಶ್ರೀ ಕ್ಷೇತ್ರ ಕಳಿಬೈಲ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇದೀಗ ಹೆಚ್ಚಿನ ಅರಿವು ಮೂಡಿದೆ. ನಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು, ಅದರ ಪ್ರಯೋಜನವನ್ನು ಜನರಿಗೆ ತಲುಪಿಸಬೇಕು. ಕ್ಷೇತ್ರದ ಭಕ್ತರು ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಿರುವುದು ಸಂತೋಷ ತಂದಿದೆ ಎಂದರು.
ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಹಿಂದೆ ದೈವಿಕ ಪ್ರೇರಣೆಯೂ ಇರುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಶುಭ ಹಾರೈಸಿ, ಆತ್ಮೀಯ ಆಹ್ವಾನಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಸಮಾನತೆಯ ವೇದಿಕೆಯೇ ನಿಜವಾದ ಅಮೃತ: ಚಂದ್ರಮೋಹನ್ ಪಾಂಡೇಶ್ವರ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಶಾರದೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಮೋಹನ್ ಪಾಂಡೇಶ್ವರ ಅವರು, ಸಮಾನತೆ ಇರುವ ವೇದಿಕೆಯಲ್ಲಿ ನಿಜವಾದ ಶಕ್ತಿ ಅಡಗಿದೆ ಎಂದು ಹೇಳಿದರು.
ಭಾಷಣ ಮಾಡುವುದಕ್ಕಿಂತ ಕಾರ್ಯಕ್ರಮಗಳನ್ನು ಗಮನಿಸುವುದರಲ್ಲಿ ತಮಗೆ ಹೆಚ್ಚಿನ ಆಸಕ್ತಿ ಇದೆ ಎಂದ ಅವರು, ‘ಭಜನಾಮೃತ’ ಎಂಬ ಹೆಸರೇ ಅರ್ಥಪೂರ್ಣವಾಗಿದೆ. ತಮ್ಮ ಅನುಭವದ ಪ್ರಕಾರ, ಎಲ್ಲಿ ಸಮಾನತೆ ಇರುತ್ತದೆಯೋ ಅಲ್ಲಿ ಶಕ್ತಿ ಇರುತ್ತದೆ. ಅಂತಹ ಶಕ್ತಿಯು ಅಮೃತದಂತೆ ಎಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಕಳಿಬೈಲ್ನಲ್ಲಿ ಸ್ವಾಮಿ ಕೊರಗಜ್ಜರ ಸಾನಿಧ್ಯದಲ್ಲಿ ಯಾವುದೇ ಅಸಮಾನತೆಗೆ ಅವಕಾಶವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ವೇದಿಕೆಯನ್ನು ನಿರ್ಮಿಸಿರುವುದು ಶ್ಲಾಘನೀಯ. ಸಮಾನತೆ ಮತ್ತು ಸಾಮರಸ್ಯವನ್ನು ಸಾರುವ ಇಂತಹ ವೇದಿಕೆಗಳು ಸಮಾಜಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಭಜನೆಯಿಂದ ಮನಸ್ಸಿಗೆ ನೆಮ್ಮದಿ, ಬದುಕಿಗೆ ಸ್ಫೂರ್ತಿ: ವಿಜಯ್ ಪೂಜಾರಿ
ಸಾಸ್ತಾನ ಸಹಕಾರಿ ಕೃಷಿ ಸಂಘದ (ಸಿ.ಎ. ಬ್ಯಾಂಕ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಪೂಜಾರಿ ಮಾತನಾಡಿ, ಭಜನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ಧಾರ್ಮಿಕ ಶ್ರದ್ಧೆ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಬಲಗೊಳ್ಳುತ್ತವೆ ಎಂದರು.
ಹಿಂದಿನ ಕಾಲದಲ್ಲಿ ಹಿರಿಯರು ಮನೆಮನೆಗಳಲ್ಲಿ ಭಜನೆ ಮಾಡುವ ಮೂಲಕ ಭಕ್ತಿ ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಬೆಳೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ, ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಧಾರ್ಮಿಕ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ನವರಾತ್ರಿ ಸಂದರ್ಭದಲ್ಲಿ ದೇವಿಯ ಆರಾಧನೆಯಿಂದ ಆಧ್ಯಾತ್ಮಿಕ ಶಕ್ತಿ ಹಾಗೂ ಸಕಾರಾತ್ಮಕ ಚಿಂತನೆಗಳಿಗೆ ಪ್ರೇರಣೆ ದೊರೆಯುತ್ತದೆ. ದುಷ್ಟ ಪ್ರವೃತ್ತಿಗಳನ್ನು ದೂರಮಾಡಿ, ಸನ್ಮಾರ್ಗದಲ್ಲಿ ನಡೆಯಲು ದೇವಿಯ ಆರಾಧನೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದರು.
ಭಕ್ತರಿಗೆ ಸನ್ಮಾನ

ಈ ಸಂದರ್ಭದಲ್ಲಿ ಕ್ಷೇತ್ರದ ಭಕ್ತರೂ, ಶ್ರೀ ದುರ್ಗಾಪರಮೇಶ್ವರಿ ಇಂಜಿನಿಯರಿಂಗ್ ವರ್ಕ್ಸ್ನ ಮಾಲೀಕರೂ ಆದ ಸುಭಾಷ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ‘ಡೈಲಿ ವಾರ್ತೆ’ ಸಂಪಾದಕ ಇಬ್ರಾಹಿಂ ಕೋಟ, ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ ಮಾಲೀಕ ಸುದರ್ಶನ್, ಕ್ಷೇತ್ರದ ಅಧ್ಯಕ್ಷ ಎಂ.ಸಿ. ಚಂದ್ರಶೇಖರ, ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ವೆಲೇರಿನ ಡಿಸೋಜ ಹಾಗೂ ಶ್ರೀ ಅಮೃತೇಶ್ವರಿ ಭಜನಾಮೃತ ತಂಡದ ಮುಖ್ಯಸ್ಥೆ ಲತಾ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಕಳಿಬೈಲ್ನ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಶ ಆಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.