




ಡೈಲಿವಾರ್ತೆ:14/ಅ./2026

ಕೋಟ: ಅಕ್ರಮ ಜಾನುವಾರು ಸಾಗಾಟ ಪತ್ತೆ: ನಾಲ್ವರು ವಶಕ್ಕೆ

ಕೋಟ: ಮಾಂಸಕ್ಕಾಗಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೋಟ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು, ಏಳು ಜಾನುವಾರುಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಬುಲೇರೋ ಪಿಕ್ಅಪ್ ವಾಹನ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಅ.13ರಂದು ರಾತ್ರಿ ತೆಕ್ಕಟ್ಟೆ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಆರ್. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ KA-40-B-8708 ನೋಂದಣಿ ಸಂಖ್ಯೆಯ ಬುಲೇರೋ ಪಿಕ್ಅಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 8.30ಕ್ಕೆ ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖೆಯ ಜೀಪು ಹಾಗೂ ಖಾಸಗಿ ವಾಹನದಲ್ಲಿ ತೆರಳಿದ ಪೊಲೀಸರು, ತೆಕ್ಕಟ್ಟೆ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ರಾತ್ರಿ ಸುಮಾರು 9 ಗಂಟೆಗೆ ಸಂಶಯಾಸ್ಪದ ಬುಲೇರೋ ಪಿಕ್ಅಪ್ ವಾಹನವು ಪೊಲೀಸರಿಂದ ಸುಮಾರು 50 ಮೀಟರ್ ದೂರದಲ್ಲಿ ನಿಂತಿದ್ದು, ಅದನ್ನು ಪರಿಶೀಲಿಸಲು ಪೊಲೀಸರು ಮುಂದಾದಾಗ ವಾಹನದಲ್ಲಿದ್ದ ನಾಲ್ವರು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ಹಿಡಿದು ವಾಹನವನ್ನು ಪರಿಶೀಲಿಸಿದ್ದಾರೆ.

ವಾಹನದಲ್ಲಿ ಐದು ದನಗಳು ಹಾಗೂ ಎರಡು ಎರಡು ತಿಂಗಳ ಹೆಣ್ಣು ಕರುಗಳು ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಜಾನುವಾರುಗಳ ಕುತ್ತಿಗೆಗೆ ನೈಲಾನ್ ಹಗ್ಗಗಳನ್ನು ಬಿಗಿದು, ಆಹಾರ, ಮೇವು ಹಾಗೂ ನೀರಿನ ವ್ಯವಸ್ಥೆ ಮಾಡದೆ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಶಕ್ಕೆ ಪಡೆದವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪುನೀತ್ (27), ಕೋಲಾರ ಜಿಲ್ಲೆಯ ಬಾಗೇಪಲ್ಲಿಯ ಗಣೇಶ್ (26), ಚಿಕ್ಕಬಳ್ಳಾಪುರದ ಕೃಷ್ಣಪ್ಪ (40) ಹಾಗೂ ಶ್ರೀನಿವಾಸ (56) ಎಂದು ಗುರುತಿಸಲಾಗಿದೆ.
ಪೊಲೀಸರು ಕಾರ್ಯಾಚರಣೆಯಲ್ಲಿ ಅಂದಾಜು ₹2 ಲಕ್ಷ ಮೌಲ್ಯದ ಬುಲೇರೋ ಪಿಕ್ಅಪ್ ವಾಹನ, ಐದು ದನಗಳು, ಎರಡು ಹೆಣ್ಣು ಕರುಗಳು, ಎರಡು ಮೊಬೈಲ್ ಫೋನ್ಗಳು ಹಾಗೂ ₹1,850 ನಗದು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ₹27,000 ಎಂದು ತಿಳಿದುಬಂದಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 155/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 303(3), 3(5), ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಹಾಗೂ ಪ್ರಾಣಿಹಿಂಸೆ ತಡೆ ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ