




ಡೈಲಿವಾರ್ತೆ:14/ಅ./2026

ಬಂಟ್ವಾಳ : ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದಿಂದ ಬಿ.ಸಿ.ರೋಡಿನಲ್ಲಿ ಶನಿವಾರದ ಸಂತೆ – ನ.17ರಿಂದ ಆರಂಭ

ಬಂಟ್ವಾಳ : ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಶನಿವಾರದ ಸಂತೆ ಆರಂಭವಾಗಲಿದ್ದು, ನ.17ರಂದು ಬೆಳಿಗ್ಗೆ ಉದ್ಘಾಟನೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಭಾಷ್ಚಂದ್ರ ಜೈನ್ ತಿಳಿಸಿದರು.

ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಶನಿವಾರದ ಸಂತೆ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಗ್ರಾಮೀಣ ಭಾಗದ ಕೃಷಿಕರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಇದರಿಂದ ಅವಕಾಶ ದೊರೆಯಲಿದೆ. ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದರ ಜತೆಗೆ ಸ್ಥಳೀಯ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸೂಕ್ತ ವೇದಿಕೆ ದೊರೆಯುವುದರ ಜತೆಗೆ ಗ್ರಾಹಕರಿಗೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗಲಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಈ ಸಂತೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶನಿವಾರದ ಸಂತೆಯನ್ನು ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ. ರಮಾನಾಥ ರೈ, ಲಾವಣ್ಯ ಬಲ್ಲಾಳ್, ಗಿರೀಶ್ ಬಿ. ಸಾಲ್ಯಾನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮೋಹನ್ ಸಾಲಿಯಾನ್ ಹಾಗೂ ಶ್ಯಾಮಲಾ ಮೋಹನ್ ಸಾಲಿಯಾನ ಅವರು ಶನಿವಾರದ ಸಂತೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ್ ರೈ, ನಿರ್ದೇಶಕರಾದ ಗಜೇಂದ್ರ ಪ್ರಭು, ರವೀಂದ್ರ, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಬಟ್ಟಪ್ಪ ಶೆಟ್ಟಿ, ಲೋಕೇಶ್ ಸುವರ್ಣ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು.