




ಡೈಲಿವಾರ್ತೆ:18/ಅ./2026

ಮಂಗಳೂರು: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ತಲೆಮರೆಸಿಕೊಂಡಿದ್ದ ವೆಲೆನ್ಸಿಯಾ ಚರ್ಚ್ ಪಾದ್ರಿ ಬಂಧನ!

ಮಂಗಳೂರು, ಅ.18: ಚರ್ಚ್ಗೆ ಬರುತ್ತಿದ್ದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವೆಲೆನ್ಸಿಯಾ ಚರ್ಚ್ನ ಪಾದ್ರಿ ಸಿಪ್ರಿಯನ್ ಪಿಂಟೋ ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಕಲೇಶಪುರದಲ್ಲಿ ಸಂಬಂಧಿಕರ ಮನೆಯೊಂದರಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದ ಪೊಲೀಸರು, ಮಂಗಳೂರಿಗೆ ಕರೆತಂದಿದ್ದಾರೆ.
ಪೋಕ್ಸೊ ಕಾಯ್ದೆಯಡಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಪಾದ್ರಿ ಸಿಪ್ರಿಯನ್ ಪಿಂಟೋ ಮಂಗಳೂರಿನಿಂದ ಪರಾರಿಯಾಗಿದ್ದರು. ಬಾಲಕರಿಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆರೋಪಿಯ ಪತ್ತೆಗಾಗಿ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಬೆಂಗಳೂರಿನ ಹಲವು ಸ್ಥಳಗಳಲ್ಲಿಯೂ ಪೊಲೀಸರು ತಲಾಶ್ ನಡೆಸಿದ್ದರು ಎನ್ನಲಾಗಿದೆ.
ಚರ್ಚ್ಗೆ ಬರುತ್ತಿದ್ದ ಬಾಲಕರಿಗೆ ಚಾಕಲೇಟ್ ನೀಡಿ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಪಾದ್ರಿ ವಿರುದ್ಧ ಕೇಳಿಬಂದಿದೆ. ಪಾದ್ರಿಯ ವರ್ತನೆಯ ಕುರಿತು ಬಾಲಕರು ತಮ್ಮ ಹೆತ್ತವರ ಬಳಿ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾದ್ರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರು ಬಿಷಪ್ ಅವರಿಗೂ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದೆ.
ಬಳಿಕ ಮೈಸೂರಿನ ಒಡನಾಡಿ ಸಂಸ್ಥೆಯವರು ಈ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಇದಾದ ನಂತರ ಸಂತ್ರಸ್ತ ಬಾಲಕರ ಕುಟುಂಬದವರು ಪೊಲೀಸರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಗಳ ಕುರಿತಾದ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.