ಡೈಲಿವಾರ್ತೆ:18/ಅ./2026

ಕಡವೆ ಬೇಟೆ ಪ್ರಕರಣ: ಓರ್ವನ ಬಂಧನ, ಐವರು ಆರೋಪಿಗಳು ಪರಾರಿ!

ವರದಿ : ವಿದ್ಯಾಧರ ಮೊರಬಾ

ಅಂಕೋಲಾ: ಅರಣ್ಯದಲ್ಲಿ ವನ್ಯಜೀವಿಗಳ ಬೇಟೆಯಾಡಿ ಮಾಂಸವನ್ನು ಸಾಗಿಸಲು ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಐವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದ ಅಡಿಕೆ ತೋಟವೊಂದರಲ್ಲಿ ಕಡವೆಯನ್ನು ಬೇಟೆಯಾಡಿ, ಅದರ ಚರ್ಮ ಬೇರ್ಪಡಿಸಿ ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಅಕ್ಟೋಬರ್ 16ರಂದು ರಾತ್ರಿ ರಾಮನಗುಳಿ ವಲಯದ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಬಾಬು ಸಿದ್ದಿ ಅವರ ಅಡಿಕೆ ತೋಟದ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಆರು ಮಂದಿ ಕಡವೆಯನ್ನು ಕೊಂದು, ಅದರ ಮಾಂಸವನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕಾರ್ಯಾಚರಣೆ ವೇಳೆ ಚನ್ನೇಮನೆಯ ನಾರಾಯಣ ಗುರಕ್ಯಾ ಸಿದ್ದಿ (60) ಎಂಬಾತನನ್ನು ವಶಕ್ಕೆ ಪಡೆದು ಬಂಧಿಸಲಾಯಿತು. ಬಳಿಕ ಆರೋಪಿಯನ್ನು ಅಂಕೋಲಾದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗಣೇಶ ರಾಮು ರಾಠೋಡ (27), ಲಕ್ಷ್ಮಣ ಬಾಬು ಸಿದ್ದಿ (55), ಲೋಕೇಶ ನಾರಾಯಣ ಸಿದ್ದಿ (50), ಶಿವರಾಜ ಲಕ್ಷ್ಮಣ ಸಿದ್ದಿ (30) ಹಾಗೂ ರಾಜು ಕೃಷ್ಣಾ ಸಿದ್ದಿ (45) ಎಂಬ ಐವರು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಕಡವೆಯ ಮಾಂಸ, ತಲೆ, ಕಾಲು, ಚರ್ಮ ಸೇರಿದಂತೆ ವಿವಿಧ ಅಂಗಾಂಗಗಳನ್ನು ತುಂಬಿದ್ದ ಮೂರು ಚೀಲಗಳು, ಮೂರು ಕತ್ತಿಗಳು, ಒಂದು ಚಾಕು ಹಾಗೂ ಹೆಡ್‌ಟಾರ್ಚ್‌ನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಂದಾಜು ₹1.5 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ವನ್ಯಜೀವಿ ಬೇಟೆಗೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್. ಮಾರಿಯಪ್ಪ ಅವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಫುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಉಪವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ ಹಟ್ಟಿ, ಅಕ್ಷಯ ಇ.ಎಂ., ಸಂತೋಷ ಕರಚಕಟ್ಟಿ, ಅರಣ್ಯ ಪಾಲಕರಾದ ಸತೀಶ ಮರ್ಚಪ್ಪನವರ, ಅಲ್ಮಾಸ್ ಬಿಜಾಪುರ, ಪ್ರಭುದೇವ ಮಣಕವಾಡ, ಸೋಮನಾಥ ಕಂಬಾರ ಸೇರಿದಂತೆ ಅರಣ್ಯ ಇಲಾಖೆಯ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.