




ಡೈಲಿವಾರ್ತೆ:18/ಅ./2026

ಬಂಟ್ವಾಳ: ಸಾಲದ ಹಣ ಕೇಳಿದ ಅಣ್ಣ-ತಮ್ಮನ ಮೇಲೆ ಚಾಕುವಿನಿಂದ ದಾಳಿ – ಆರೋಪಿ ವಶಕ್ಕೆ

ಬಂಟ್ವಾಳ: ಸಾಲವಾಗಿ ಪಡೆದ ಹಣವನ್ನು ವಾಪಸ್ ನೀಡುವುದಾಗಿ ನಂಬಿಸಿ ಕರೆಸಿಕೊಂಡು ಅಣ್ಣ-ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಅಕ್ಟೋಬರ್ 17ರಂದು ರಾತ್ರಿ ನಡೆದಿದೆ.
ಘಟನೆಯಲ್ಲಿ ಉದಯ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿ ಮೂಡ ಗ್ರಾಮದ ನಿವಾಸಿ ಲೋಕೇಶ್ (27) ಅವರು ನೀಡಿದ ದೂರಿನ ಪ್ರಕಾರ, ಪಲ್ಲಮಜಲು ನಿವಾಸಿ ಅಜಿತ್ ಕಲ್ಲಗುಡ್ಡೆ ಎಂಬಾತ ಲೋಕೇಶ್ ಅವರ ಸಹೋದರ ಉದಯ ಅವರಿಂದ ಹಣ ಪಡೆದುಕೊಂಡಿದ್ದ. ಈ ಹಣವನ್ನು ಹಿಂದಿರುಗಿಸುವಂತೆ ಉದಯ ಅವರು ಹಲವು ಬಾರಿ ಕೇಳಿಕೊಂಡಿದ್ದರು ಎನ್ನಲಾಗಿದೆ.
ಅಕ್ಟೋಬರ್ 17ರಂದು ರಾತ್ರಿ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದ ಅಜಿತ್, ಉದಯ ಅವರನ್ನು ಪಲ್ಲಮಜಲು ಜಂಕ್ಷನ್ಗೆ ಬರುವಂತೆ ಕರೆದಿದ್ದಾನೆ. ಅದರಂತೆ ಹಣ ಪಡೆಯುವ ಉದ್ದೇಶದಿಂದ ಉದಯ ಸ್ಥಳಕ್ಕೆ ತೆರಳಿದ್ದು, ಈ ವೇಳೆ ತನ್ನ ಸಹೋದರ ಲೋಕೇಶ್ ಅವರಿಗೂ ಅಲ್ಲಿಗೆ ಬರುವಂತೆ ತಿಳಿಸಿದ್ದರು.
ಲೋಕೇಶ್ ಸ್ಥಳಕ್ಕೆ ತಲುಪಿದಾಗ ಅಜಿತ್ ಚಾಕುವಿನಿಂದ ಉದಯ ಅವರಿಗೆ ಇರಿಯುತ್ತಿರುವುದು ಕಂಡುಬಂದಿದೆ. ಈ ವೇಳೆ ಸಹೋದರನನ್ನು ರಕ್ಷಿಸಲು ಮುಂದಾದ ಲೋಕೇಶ್ ಅವರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಸ್ಥಳೀಯರು ಗಾಯಾಳು ಉದಯ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಸಂಬಂಧ ಲೋಕೇಶ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಯಾಗಿರುವ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಅಕ್ಟೋಬರ್ 18ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.