ಡೈಲಿವಾರ್ತೆ:19/ಅ./2026

ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ರಾಜಸ್ಥಾನದಲ್ಲಿ ಮೂವರು ಶಂಕಿತ ಶೂಟರ್‌ಗಳ ಬಂಧನ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಭಾನುವಾರ ಸಂಜೆ ಸುಮಾರು 7 ಗಂಟೆಗೆ ಜುಹು ಪ್ರದೇಶದ ಪುಷ್ಪಾ ನರ್ಸಿ ಪಾರ್ಕ್ ಸಮೀಪ ಈ ಘಟನೆ ನಡೆದಿತ್ತು. ಟೈಗರ್ ಶ್ರಾಫ್ ಅವರು ಅಲ್ಲಿಂದ ತೆರಳುತ್ತಿದ್ದ ಸಂದರ್ಭದಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಕಾರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಟೈಗರ್ ಶ್ರಾಫ್ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಆದರೆ ಅವರ ಕಾರಿನ ಚಾಲಕ ಹಾಗೂ ಆಟೋರಿಕ್ಷಾ ಚಾಲಕರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಘಟನೆಯಿಂದ ಮುಂಬೈನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದಾಳಿಯ ಹಿಂದಿನ ಉದ್ದೇಶದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೂವರಲ್ಲಿ ಹರಿಯಾಣ ಮೂಲದ 17 ಮತ್ತು 18 ವರ್ಷದ ಇಬ್ಬರು ಯುವಕರು ಹಾಗೂ ಮುಂಬೈನಲ್ಲಿ ಬೈಕ್‌-ಟ್ಯಾಕ್ಸಿ ಸವಾರನಾಗಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕ ಸೇರಿದ್ದಾರೆ. ರಾಜಸ್ಥಾನದ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ ಮತ್ತು ಕೋಟಾ ಸಿಟಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ, ಗುಂಡಿನ ದಾಳಿಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೈವಾಡವಿದೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ನಂಟಿನ ಕುರಿತು ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ದಾಳಿಯ ಹಿಂದೆ ಯಾವುದೇ ಸಂಘಟಿತ ಅಪರಾಧ ಜಾಲದ ಪಾತ್ರವಿದೆಯೇ ಎಂಬುದನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಅಪರಾಧ ವಿಭಾಗದ ಪೊಲೀಸರು, ದಾಳಿಯಲ್ಲಿ ಪ್ರತಿಯೊಬ್ಬ ಶಂಕಿತನ ಪಾತ್ರ, ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ಕೃತ್ಯದ ಹಿಂದಿನ ನೈಜ ಉದ್ದೇಶವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.