ಡೈಲಿವಾರ್ತೆ:19/ಅ./2026

ಕೋಟದಲ್ಲಿ ಮೊಹಮ್ಮದ್ ಇಕ್ಬಾಲ್ ನಿಗೂಢ ಸಾವು: ಪತ್ನಿಯ ಮನೆಯವರ ವಿರುದ್ಧ ಸಂಶಯ – ಸಹೋದರಿಯಿಂದ ದೂರು!

ಕೋಟ: ಪಾರಂಪಳ್ಳಿ ಗ್ರಾಮದ ಮಸೀದಿ ಬಳಿಯ ಬೀಚ್ ಸಮೀಪದ ಮನೆಯಲ್ಲಿ ವಾಸವಿದ್ದ ಮೊಹಮ್ಮದ್ ಇಕ್ಬಾಲ್ (49) ಎಂಬವರು ಮೃತಪಟ್ಟಿದ್ದು, ಅವರ ಸಾವಿನ ಬಗ್ಗೆ ಸಂಶಯವಿರುವುದಾಗಿ ಅವರ ಸಹೋದರಿ ಬಲ್ಕೀಸ್ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೋಟತಟ್ಟು ಗ್ರಾಮದ ನಿವಾಸಿಯಾಗಿರುವ ಬಲ್ಕೀಸ್ ಅವರ ಸಹೋದರ ಮೊಹಮ್ಮದ್ ಇಕ್ಬಾಲ್ ಕಳೆದ ಒಂದು ವರ್ಷದಿಂದ ಪತ್ನಿಯ ಮನೆಯಾದ ಪಾರಂಪಳ್ಳಿ ಗ್ರಾಮದ ಮನೆಯಲ್ಲಿ ವಾಸವಿದ್ದರು. ಅ.19ರಂದು ಬೆಳಗಿನ ಜಾವ ಸುಮಾರು 3.40ರ ವೇಳೆಗೆ ಅವರನ್ನು ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬೆಳಗಿನ ಜಾವ 3.50ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೊಹಮ್ಮದ್ ಇಕ್ಬಾಲ್ ಅವರು ಮನೆಗೆ ಬಂದಾಗಲೆಲ್ಲ ಪತ್ನಿ ಸಫ್ರಾಭಿ ತಮ್ಮೊಂದಿಗೆ ಪದೇಪದೇ ಗಲಾಟೆ ಮಾಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸುತ್ತಿದ್ದರು ಎಂದು ಬಲ್ಕೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಅ.14ರಂದು ರಾತ್ರಿ ಅಬ್ದುಲ್ ರಜಾಕ್ ಅವರು ಮನೆಗೆ ಬಂದು ಇಕ್ಬಾಲ್ ಮತ್ತು ಅವರ ಪತ್ನಿಯ ಮನೆಯವರ ನಡುವೆ ಗಲಾಟೆ ನಡೆದಿರುವುದಾಗಿ ತಿಳಿಸಿದ್ದರು. ಇದಾದ ಸುಮಾರು ಅರ್ಧ ಗಂಟೆಯ ಬಳಿಕ ಮನೆಗೆ ಬಂದ ಇಕ್ಬಾಲ್ ಅವರ ಬನಿಯನ್ ಹರಿದಿರುವುದು ಕಂಡುಬಂದಿತ್ತು. ಈ ಬಗ್ಗೆ ಪೊಲೀಸ್ ದೂರು ನೀಡುವುದಾಗಿ ಇಕ್ಬಾಲ್ ತಿಳಿಸಿದ್ದರೂ, ಕುಟುಂಬದವರು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
ಇಕ್ಬಾಲ್ ಅವರ ಮನೆಯಲ್ಲಿ ಮತ್ತೆ ಗಲಾಟೆ ನಡೆದಿರುವ ಸಾಧ್ಯತೆಯಿದ್ದು, ಅವರ ಸಾವಿನ ಬಗ್ಗೆ ಸಂಶಯವಿದೆ ಎಂದು ಬಲ್ಕೀಸ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 44/2026ರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194(3)(iv) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.