ಡೈಲಿವಾರ್ತೆ:20/ಅ./2026

ಉಚ್ಚಿಲ ದಸರಾ ಶೋಭಾಯಾತ್ರೆ: ಅ.21ರಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘನ ವಾಹನಗಳಿಗೆ ಸಂಜೆ 3ರಿಂದ ರಾತ್ರಿ 11ರವರೆಗೆ ನಿರ್ಬಂಧ –
ಪರ್ಯಾಯ ಮಾರ್ಗ ಪ್ರಕಟ: ಜಿಲ್ಲಾಧಿಕಾರಿ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ-2026ರ ಸಮಾರೋಪದ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹಾಗೂ ಪರ್ಯಾಯ ಮಾರ್ಗ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್ 11ರಂದು ಆರಂಭಗೊಂಡಿರುವ ಉಚ್ಚಿಲ ದಸರಾ ಮಹೋತ್ಸವ ಅ.21ರಂದು ಸಮಾಪನಗೊಳ್ಳಲಿದ್ದು, ಅಂದು ನಡೆಯಲಿರುವ ಬೃಹತ್ ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿರುವುದರಿಂದ ಪೊಲೀಸ್ ಅಧೀಕ್ಷಕರ ವರದಿಯ ಆಧಾರದಲ್ಲಿ ಜಿಲ್ಲಾಡಳಿತ ಸಂಚಾರ ನಿಯಂತ್ರಣ ಕ್ರಮ ಕೈಗೊಂಡಿದೆ.

ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ
ಆದೇಶದ ಪ್ರಕಾರ, ಅಕ್ಟೋಬರ್ 21ರಂದು ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಉಡುಪಿ-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ವಾಹನಗಳು ಕಟಪಾಡಿ-ಶಿರ್ವ-ಬೆಳ್ಮಣ್ ಹಾಗೂ ಪಡುಬಿದ್ರಿ ಮೂಲಕ ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ನಿರ್ದೇಶಿಸಲಾಗಿದೆ.

ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಕಟಪಾಡಿ-ಶಿರ್ವ-ಬೆಳ್ಮಣ್-ಮುಂಡೂರು ಮಾರ್ಗವಾಗಿ ಸಂಚರಿಸಬೇಕು. ಟ್ರಕ್, ಲಾರಿ ಹಾಗೂ ಟ್ಯಾಂಕರ್ ಸೇರಿದಂತೆ ಘನ ವಾಹನಗಳು ರಾತ್ರಿ 9ರವರೆಗೆ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿರುವ ಟ್ರಕ್ ಬೇಗಳಲ್ಲಿ ನಿಲುಗಡೆ ಮಾಡಬೇಕು. ಬಳಿಕ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾತ್ರಿ 9ರ ಬಳಿಕ ಬಸ್‌ಗಳಿಗೆ ಪ್ರಯಾಣ ಮುಂದುವರಿಸಲು ಸೂಚನೆ
ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾತ್ರಿ ಪ್ರಯಾಣಿಕರ ಬಸ್‌ಗಳು ರಾತ್ರಿ 9ರ ಬಳಿಕ ಸಂಚಾರ ಮುಂದುವರಿಸುವಂತೆ ಸೂಚಿಸಲಾಗಿದೆ. ಆದರೆ, ವಿವಿಐಪಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ಈ ಸಂಚಾರ ನಿಯಂತ್ರಣ ಅನ್ವಯಿಸುವುದಿಲ್ಲ.
ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989ರ ನಿಯಮ 221(5)(ಎ)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಅಕ್ಟೋಬರ್ 16ರಂದು ಈ ಆದೇಶ ಹೊರಡಿಸಿದ್ದಾರೆ.

ಉಚ್ಚಿಲ ದಸರಾ ಸಮಾರೋಪದ ಶೋಭಾಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ನಿಯಂತ್ರಣ ಕ್ರಮಗಳಿಗೆ ಸಹಕರಿಸಿ, ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.