




ಡೈಲಿವಾರ್ತೆ:20/ಅ./2026

ಮುಂಬೈ ರಸ್ತೆ ಅಪಘಾತಕ್ಕೆ ಭಟ್ಕಳದ ವ್ಯಕ್ತಿ ಬಲಿ!

ಭಟ್ಕಳ: ಮುಂಬೈನ ದಾದರ್ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಟ್ಕಳ ಮೂಲದ ಶಕೀಲ್ ಶಾ ಬಂದ್ರಿ ಅಲಿಯಾಸ್ ಸೋಂತ ಶಕೀಲ್ (58) ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.
ಭಟ್ಕಳ ಮುಸ್ಲಿಂ ಜಮಾತ್ ಮುಂಬೈನ ಸಕ್ರಿಯ ಸದಸ್ಯ ಕಮರ್-ಉಜ್-ಜಮಾನ್ ಮೋತಿಯಾ ನೀಡಿರುವ ಮಾಹಿತಿಯ ಪ್ರಕಾರ, ಶಕೀಲ್ ಶಾ ಬಂದ್ರಿ ಅವರು ಸೋಮವಾರ ಮಧ್ಯಾಹ್ನ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ ದಾದರ್ ಪ್ರದೇಶದಲ್ಲಿ ಮತ್ತೊಂದು ಸ್ಕೂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆಗೆ ಬಿದ್ದಿದ್ದು, ಇದೇ ವೇಳೆ ಲಾರಿಯೊಂದು ಅವರ ಪಾದದ ಮೇಲೆ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಗಾಯಾಳುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ರಾತ್ರಿ ಸುಮಾರು 10 ಗಂಟೆಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಮುಂಜಾನೆ 1.45ರ ಸುಮಾರಿಗೆ ಮೃತದೇಹವನ್ನು ಮುಂಬೈನ ಭೆಂಡಿ ಬಜಾರ್ನ ನಖೋಡಾ ಮೊಹಲ್ಲಾದ ನೂರ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮೃತದೇಹವನ್ನು ಭಟ್ಕಳಕ್ಕೆ ತರಲು ಭಟ್ಕಳ ಮುಸ್ಲಿಂ ಜಮಾತ್ ಮುಂಬೈನ ಪದಾಧಿಕಾರಿಗಳು ಅಗತ್ಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ ಎಂದು ಕಮರ್-ಉಜ್-ಜಮಾನ್ ಮೋತಿಯಾ ತಿಳಿಸಿದ್ದಾರೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೃತದೇಹವನ್ನು ಭಟ್ಕಳಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃತ ಶಕೀಲ್ ಶಾ ಬಂದ್ರಿ ಅವರ ಮನೆ ಭಟ್ಕಳದ ಆಜಾದ್ ನಗರದ ತೂಬಾ ಮಸೀದಿ ಸಮೀಪದಲ್ಲಿದೆ ಎಂದು ತಿಳಿದುಬಂದಿದೆ