ಡೈಲಿವಾರ್ತೆ:20/ಅ./2026

ಉಪ್ಪಿನಂಗಡಿಯಲ್ಲಿ ತಲವಾರು, ಬಿಯರ್ ಬಾಟಲಿ ಹಿಡಿದು ಗಲಾಟೆ: ಇಬ್ಬರ ಬಂಧನ, ಮತ್ತೊಬ್ಬ ಪರಾರಿ

ಉಪ್ಪಿನಂಗಡಿ: ತಲವಾರು ಹಾಗೂ ಬಿಯರ್ ಬಾಟಲಿ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ ಆರೋಪದಡಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತರನ್ನು ಪುತ್ತೂರು ತಾಲೂಕಿನ ಚಿಕ್ಕಮುಳ್ಳೂರು ನಿವಾಸಿ ಮಂಜುನಾಥ (32) ಹಾಗೂ ನೆಕ್ಕಿಲಾಡಿ ನಿವಾಸಿ ವಿಶ್ವನಾಥ (30) ಎಂದು ಗುರುತಿಸಲಾಗಿದೆ. ಪರಾರಿಯಾದ ಆರೋಪಿಯನ್ನು ಮುನ್ನ ಯಾನೆ ಗೋಪಾಲ ಶೆಟ್ಟಿ ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಮದ್ಯದ ಅಮಲಿನಲ್ಲಿದ್ದ ಮುನ್ನ ಎಂಬಾತ ಮಂಜುನಾಥನ ಮನೆಯವರನ್ನು ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ಗಲಾಟೆಗೆ ತಿರುಗಿದೆ. ಈ ಸಂದರ್ಭದಲ್ಲಿ ಬಾರ್‌ನಿಂದ ಹೊರಬಂದ ಮಂಜುನಾಥ ತನ್ನ ಬಳಿಯಿದ್ದ ತಲವಾರನ್ನು ಪ್ರದರ್ಶಿಸಿ ಮುನ್ನನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಮುನ್ನ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಪ್ರದರ್ಶಿಸಿದ್ದಾನೆ ಎಂದು ತಿಳಿದುಬಂದಿದೆ.

ಕಾರ್ತಿಕ್ ಬಾರ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಾಗೂ ಬಿಯರ್ ಬಾಟಲಿ ಹಿಡಿದು ಗಲಾಟೆ ನಡೆಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಈ ವೇಳೆ ಮಂಜುನಾಥನ ಹಿಂಬದಿಯಿಂದ ತೆರಳಿದ ಪೊಲೀಸ್ ಸಿಬ್ಬಂದಿಯೊಬ್ಬರು ಆತನ ಎರಡೂ ಕೈಗಳನ್ನು ಹಿಡಿದು ನಿಯಂತ್ರಿಸಿ, ಆತನ ಬಳಿಯಿದ್ದ ತಲವಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಪೊಲೀಸರನ್ನು ಕಂಡ ಮುನ್ನ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.