




ಡೈಲಿವಾರ್ತೆ:20/ಅ./2026

ಉಳ್ಳಾಲ: ಓವರ್ಟೇಕ್ ಭರಾಟೆಗೆ ಇಬ್ಬರು ಯುವಕರ ಬಲಿ – ಪ್ರತೀಕಾರದ ಶಂಕೆ!

ಉಳ್ಳಾಲ: ಓವರ್ಟೇಕ್ ಮಾಡುವ ಭರಾಟೆಯಲ್ಲಿ ಹಿಂಬದಿಯಿಂದ ಬಂದ ಪಿಕ್ಅಪ್ ವಾಹನವೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಬೋಳಿಯಾರ್ ಸಮೀಪದ ಕುರ್ನಾಡು ಬಂಕ್ ಬಳಿ ಸಂಭವಿಸಿದೆ. ಅಪಘಾತದ ಭೀಕರತೆ ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಿಕ್ಅಪ್ ಚಾಲಕನ ವಿರುದ್ಧ ಪ್ರತೀಕಾರದ ಉದ್ದೇಶದಿಂದ ಅಪಘಾತ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಉಳ್ಳಾಲ ತಾಲೂಕು ಕಿನ್ಯ ಗ್ರಾಮದ ಅರೆಬಿನಗರ, ಉಕ್ಕುಡ ನಿವಾಸಿಗಳಾದ ಮಹಮ್ಮದ್ ಅರ್ಫಾಝ್ (23) ಮತ್ತು ಮಹಮ್ಮದ್ ಜುನೈದ್ (22) ಮೃತಪಟ್ಟ ದುರ್ದೈವಿಗಳು.
ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ಸ್ಕೂಟರ್ನಲ್ಲಿ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ಪಿಕ್ಅಪ್ ವಾಹನವೊಂದು ಸ್ಕೂಟರ್ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದು, ಕಂಬವೇ ಮುರಿದು ಬಿದ್ದಿದೆ. ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡಿದ್ದ ಅರ್ಫಾಝ್ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ, ಗಂಭೀರವಾಗಿ ಗಾಯಗೊಂಡಿದ್ದ ಜುನೈದ್ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಮೃತಪಟ್ಟಿದ್ದಾನೆ.
ಮಾತಿನ ಚಕಮಕಿ ಬಳಿಕ ಬೆನ್ನಟ್ಟಿ ಡಿಕ್ಕಿ?

ಈ ಅಪಘಾತಕ್ಕೂ ಮುನ್ನ ಬೋಳಿಯಾರ್ನಲ್ಲಿ ಪಿಕ್ಅಪ್ ಚಾಲಕ ಮತ್ತು ಸ್ಕೂಟರ್ ಸವಾರರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದ್ದು, ಬಳಿಕ ಚಾಲಕ ಸ್ಕೂಟರ್ ಸವಾರರನ್ನು ಬೆನ್ನಟ್ಟಿ, ಓವರ್ಟೇಕ್ ಮಾಡಿ ಡಿಕ್ಕಿ ಹೊಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ವ್ಯಕ್ತಿಯೊಬ್ಬರು ಮಾತನಾಡಿರುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ, ಇದು ಕೇವಲ ರಸ್ತೆ ಅಪಘಾತವೇ ಅಥವಾ ಪೂರ್ವದ ವೈಷಮ್ಯದಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯಲಾಗಿದೆಯೇ ಎಂಬ ಅನುಮಾನ ಮೂಡಿದೆ. ಆದರೆ ಈ ಆರೋಪಗಳು ಅಧಿಕೃತವಾಗಿ ದೃಢಪಟ್ಟಿಲ್ಲ.
ಅಪಘಾತದ ಬಳಿಕ ಪಿಕ್ಅಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ತುಣುಕಿನ ಸತ್ಯಾಸತ್ಯತೆ ಸೇರಿದಂತೆ ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆಯಿಂದ ಸ್ಪಷ್ಟತೆ ದೊರೆಯಬೇಕಿದೆ.
ಇಬ್ಬರ ಕುಟುಂಬಗಳಲ್ಲೂ ಹಿಂದಿನ ದುರಂತದ ಗಾಯ
ಅಪಘಾತದಲ್ಲಿ ಮೃತಪಟ್ಟ ಇಬ್ಬರು ಯುವಕರ ಕುಟುಂಬಗಳಲ್ಲೂ ಈ ಹಿಂದೆ ದುರಂತ ಸಂಭವಿಸಿತ್ತು ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ಜುನೈದ್ನ ಸಹೋದರ ಕೋವಿಡ್ ಅವಧಿಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದ ಎನ್ನಲಾಗಿದೆ. ಇನ್ನು ಅರ್ಫಾಝ್ನ ಸಹೋದರ ಕೆಲವು ವರ್ಷಗಳ ಹಿಂದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದೇ ಘಟನೆಯಲ್ಲಿ ಇಬ್ಬರು ಯುವಕರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.