ಡೈಲಿವಾರ್ತೆ:26/ಅ./2026

ನ್ಯಾಯಾಧೀಶರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಬೆಂಝ್ ಕಾರು ಡಿಕ್ಕಿ – ಸ್ಕೂಟರ್ ಸವಾರ ಸಾವು

ಕೊಚ್ಚಿ (ಕೇರಳ): ನ್ಯಾಯಾಧೀಶರೊಬ್ಬರ 17 ವರ್ಷದ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಕೊಚ್ಚಿಯಲ್ಲಿ ಸಂಭವಿಸಿದೆ. ಅಪಘಾತದ ಬಳಿಕ ಅಪ್ರಾಪ್ತನನ್ನು ವಶಕ್ಕೆ ಪಡೆದ ಪೊಲೀಸರು, ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಪ್ರಕರಣದ ಹೊಣೆಗಾರಿಕೆ ಹಾಗೂ ಬಾಲಕನ ವಿರುದ್ಧದ ಮುಂದಿನ ಕಾನೂನು ಕ್ರಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೃತರನ್ನು ಕೇರಳದ ಮಂಜಲಿ ಪ್ರದೇಶದ ನಿವಾಸಿ ಜಯಬಾಲಕೃಷ್ಣನ್ ಎಂದು ಗುರುತಿಸಲಾಗಿದೆ. ಅವರು ರಸ್ತೆ ಬದಿಯ ಉಪಾಹಾರ ಗೃಹವನ್ನು ಮುಚ್ಚಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ರವಿವಾರ ಮುಂಜಾನೆ ಸುಮಾರು 2.20ರ ವೇಳೆಗೆ ಚೆರನಲ್ಲೂರು ಪ್ರದೇಶದ ಕಂಟೈನರ್ ರಸ್ತೆಯ ಮರಪರಂಬು ಬಳಿಯ ಫೋರ್ಡ್ ಶೋರೂಂ ಸಮೀಪ ಅಪಘಾತ ನಡೆದಿದೆ ಎನ್ನಲಾಗಿದೆ. ವಲ್ಲರ್‌ಪದಂನಿಂದ ಕಲಮಸ್ಸೇರಿ ಕಡೆಗೆ ಎರಡೂ ವಾಹನಗಳು ಸಂಚರಿಸುತ್ತಿದ್ದಾಗ, ಮರ್ಸಿಡಿಸ್ ಬೆಂಝ್ ಕಾರು ಜಯಬಾಲಕೃಷ್ಣನ್ ಅವರ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಗಾಯಾಳುವಿನ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ತೀವ್ರ ಪರಿಣಾಮದಿಂದಾಗಿ ಜಯಬಾಲಕೃಷ್ಣನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಪಘಾತದ ಬಳಿಕ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಪೋಷಕರಿಗೆ ತಿಳಿಸದೆ ಕಾರನ್ನು ಮನೆಯಿಂದ ತೆಗೆದುಕೊಂಡು ಹೋಗಿದ್ದಾಗಿ ಬಾಲಕ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೆ, ಅಪಘಾತದ ಸಮಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಸ್ಕೂಟರ್ ಹಠಾತ್ತನೆ ದಿಕ್ಕು ಬದಲಿಸಿದ ಕಾರಣ ಡಿಕ್ಕಿ ಸಂಭವಿಸಿತು ಎಂಬ ಹೇಳಿಕೆಯನ್ನು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ತಂದೆ ತ್ರಿಶೂರ್‌ನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯ ಭಾಗವಾಗಿ ಅಪ್ರಾಪ್ತನಿಗೆ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಹೊಣೆಗಾರಿಕೆಯನ್ನು ನಿರ್ಧರಿಸುವುದು ಹಾಗೂ ಬಾಲಕನನ್ನು ಅಧಿಕೃತವಾಗಿ ಆರೋಪಿಯನ್ನಾಗಿ ಹೆಸರಿಸುವ ಸಾಧ್ಯತೆ ಸೇರಿದಂತೆ ವಿವಿಧ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.