




ಡೈಲಿವಾರ್ತೆ:26/ಅ./2026

ಉಡುಪಿ: ಗಾಜಿನ ಕಾರ್ಖಾನೆಯಲ್ಲಿ ಅವಘಡ – ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು

ಉಡುಪಿ: ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ಗಳನ್ನು ಇಳಿಸುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ರಿಕ್ಷಾ ಚಾಲಕ ಸುನಿಲ್ ಬೈಲಕೆರೆ (45) ಮೃತಪಟ್ಟಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಪರಿಸರದ ನಿವಾಸಿಯಾಗಿದ್ದ ಸುನಿಲ್ ಅವರು ಶಿರೂರು ಮಠದ ದಿವಂಗತ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಪ್ತರಾಗಿದ್ದರು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.
ಉಡುಪಿ ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಫಲಾಪೇಕ್ಷೆಯಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರು, ಸಾರ್ವಜನಿಕರ ನೆರವಿಗೆ ಧಾವಿಸುತ್ತಿದ್ದರು. ಕಲ್ಸಂಕ ಜಂಕ್ಷನ್ನಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತಗೊಂಡಾಗ ಪೊಲೀಸರೊಂದಿಗೆ ಕೈಜೋಡಿಸಿ ಸುಗಮ ಸಂಚಾರಕ್ಕೆ ಸಹಕರಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.