ಡೈಲಿ ವಾರ್ತೆ : 12 ಮೇ 2022

ನವದೆಹಲಿ : ವೃದ್ಧ ದಂಪತಿಗೆ ಮೊಮ್ಮಕ್ಕಳ ಮುಖ ನೋಡಬೇಕು, ಅವರ ಜೊತೆ ಆಟ ಆಡಬೇಕು ಅನ್ನೋ ಆಸೆ. ಆದರೆ ಮಗ ಸೊಸೆ ಮದುವೆ ಆಗಿ 6 ವರ್ಷವಾದರೂ – ಮಕ್ಕಳು ಮಾಡುವುದನ್ನು ಮರೆತಿದ್ದಾರೆ ಎನ್ನುವ ಸಿಟ್ಟು ವೃದ್ಧ ದಂಪತಿಯದ್ದು. ಇದೇ ಕಾರಣಕ್ಕೆ ವೃದ್ಧ ದಂಪತಿ ಈಗ ಮಗ ಸೊಸೆಯ ವಿರುದ್ಧವೇ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಒಂದು ವರ್ಷದೊಳಗೆ ಮಗ-ಸೊಸೆ ತಮಗೆ ಮೊಮ್ಮಗುವನ್ನ ಕೊಡಬೇಕು, ಇಲ್ಲದೇ ಹೋದರೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣ ನಡೆದಿರೋದು ಉತ್ತರಾಖಂಡದ ಹರಿದ್ವಾರದಲ್ಲಿ. ಸಂಜೀವ ಪ್ರಸಾದ್ ಮತ್ತು ಅವರ ಪತ್ನಿ ಸಾಧನಾ ಪ್ರಸಾದ್ ಈಗ ಮೊಮ್ಮಗುವಿನ ಮುಖ ನೋಡುವ ಆಸೆಯಿಂದ ಮಗ – ಸೊಸೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರಿಗೆ ಮಗು ಗಂಡು, ಹೆಣ್ಣು ಯಾವುದಾದ್ರೂ ಓಕೆ. ಮೊಮ್ಮಗು ಇದ್ದರೆ ಸಾಕು ಅಂತ ಹೇಳುತ್ತಿದ್ದಾರೆ.


ಮಗನ ಶಿಕ್ಷಣ, ಆತನನ್ನ ಅಮೆರಿಕಾ ಕಳುಹಿಸುವ ಸಲುವಾಗಿ ಇದ್ದ ಹಣವನ್ನೆಲ್ಲ ಖರ್ಚು ಮಾಡಿದ್ದೇನೆ. ಎರಡು ಕೋಟಿ ಖರ್ಚು ಮಾಡಿ ಮದುವೆ ಮಾಡಿ ಹನಿಮೂನ್ ಮಾಡಲು ಥೈಲ್ಯಾಂಡ್ ಕಳಿಸಿಕೊಟ್ಟಿದ್ದೇನೆ. ಆನಂತರ ಹಣ ಇಲ್ಲದೆ ಸ್ವಂತ ಮನೆಗಾಗಿ ಸಾಲ ಮಾಡಿದ್ದೇನೆ. ಈಗ ನಾನು ಆರ್ಥಿಕ ಸಮಸ್ಯೆಯನ್ನ ಎದುರಿಸ್ತಾ ಇದ್ದೇನೆ. ಮಗನಿಗೆ ಎಷ್ಟು ಹೇಳಿದರೂ ಇತ್ತ ಗಮನ ಹರಿಸುತ್ತಿಲ್ಲ. ತಾನು ಇಷ್ಟೆಲ್ಲ ಸಮಸ್ಯೆ ಎದುರಿಸುತ್ತಿದ್ದರೂ ಮಗನಿಗೆ ನಮ್ಮ ಬಗ್ಗೆ ಕಾಳಜಿಯೇ ಇಲ್ಲ. ಆದ್ದರಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಸೇರಿ ಮಗ – ಸೊಸೆಯ ವಿರುದ್ಧವೇ ಕೇಸ್ ಹಾಕಿದ್ದೇವೆ ಎಂದು ಸಂಜೀವ ಪ್ರಸಾದ್ ಹೇಳಿದ್ದಾರೆ.

ದಂಪತಿ ತಮ್ಮ ಪುತ್ರ ಶ್ರೇಯ್ ಸಾಗರ್ ಗೆ 2016 ರಲ್ಲಿ ಶುಭಾಂಗಿ ಎಂಬ ವಧುವಿನ ಜೊತೆಗೆ ಮದುವೆ ಮಾಡಿದ್ದರು. ಆನಂತರ ಮೊಮ್ಮಗು ಬೇಕೆಂದು ತಮ್ಮದೇ ಖರ್ಚಿನಲ್ಲಿ ಹನಿಮೂನ್ ಕಳಿಸಿದ್ದರು. ಅದಕ್ಕೂ ಮೊದಲು ಮಗನಿಗೆ 65 ಲಕ್ಷ ಖರ್ಚು ಮಾಡಿ ಅಮೆರಿಕದಲ್ಲಿ ವಿಮಾನದ ಪೈಲಟ್ ಓದಿಸಿದ್ದರು. ಈಗ ಮೊಮ್ಮಗುವಿನ ಬಗ್ಗೆ ಕೇಳಿದರೆ, ಮಗ ಸೊಸೆ ಕೇರ್ ಮಾಡುತ್ತಿಲ್ಲ. ನಮ್ಮನ್ನು ನೋಡಿಕೊಳ್ಳುವುದಕ್ಕೂ ತಯಾರಿಲ್ಲ. ಎಂದು ಅಲವತ್ತುಕೊಂಡಿದ್ದಾರೆ.