ಡೈಲಿ ವಾರ್ತೆ: 14/ಮೇ /2024

ಕಾರೂ ಇಲ್ಲ, ಮನೆಯೂ ಇಲ್ಲ; ಪ್ರಧಾನಿ ನರೇಂದ್ರ ಮೋದಿ ಒಟ್ಟು ಆಸ್ತಿ 3 ಕೋಟಿ ರೂ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 3 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ಯಾವುದೇ ಜಮೀನು, ಮನೆ ಅಥವಾ ಕಾರು ಹೊಂದಿಲ್ಲ ಎಂದು ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಿದರು. ಅಫಿಡವಿಟ್‌ನಲ್ಲಿ ಪ್ರಧಾನಿ ಮೋದಿ ಒಟ್ಟು 3.02 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬಳಿ ಇರುವ ನಗದು ಹಣ 52,920 ರೂ., ಗಾಂಧಿನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 73,304 ರೂ., ವಾರಾಣಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7,000 ರೂ., ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,85,60,338 ರೂ. ಠೇವಣಿ, NSC ಸ್ಕ್ರೀಂ ಅಡಿಯಲ್ಲಿ 9,12,398 ರೂ. ಹೂಡಿಕೆ, 2 ಲಕ್ಷ 67 ಸಾವಿರದ 750 ರೂ. ಮೌನ್ಯದ 4 ಚಿನ್ನದ ರಿಂಗ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರ ಆದಾಯ 2018-19ರಲ್ಲಿ 11.14 ಲಕ್ಷ ರೂ. ಇದ್ದುದು 2022-23ರಲ್ಲಿ 23.56 ಲಕ್ಷ ರೂ.ಗೆ ಏರಿಕೆಯಾಗಿದೆ.

ಮೋದಿ ವಿದ್ಯಾರ್ಹತೆ:
ಪ್ರಧಾನಿ ನರೇಂದ್ರ ಮೋದಿ 1967 ರಲ್ಲಿ ಗುಜರಾತ್ ಬೋರ್ಡ್‌ನಿಂದ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಕಲೆ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಅನ್ನು ಪೂರ್ಣಗೊಳಿಸಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ಅವರು ಜಶೋದಾಬೆನ್ ಅವರನ್ನು ತಮ್ಮ ಪತ್ನಿ ಎಂದು ಹೆಸರಿಸಿದ್ದಾರೆ.
ಇಂದು ಬೆಳಗ್ಗೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿದ ನಂತರ ಪ್ರಧಾನಿಯವರು ವಾರಾಣಸಿಯ ಕಲೆಕ್ಟರೇಟ್‌ಗೆ ನಾಮಪತ್ರ ಸಲ್ಲಿಸಲು ಆಗಮಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಅನುಪ್ರಿಯಾ ಪಟೇಲ್ ಮತ್ತು ರಾಮದಾಸ್ ಅಠಾವಳೆ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷ ಮತ್ತು ಎನ್‌ಡಿಎ ಘಟಕಗಳ ನಾಯಕರು ಈ ಸಂದರ್ಭದಲ್ಲಿ ಕಲೆಕ್ಟರೇಟ್‌ನಲ್ಲಿ ಉಪಸ್ಥಿತರಿದ್ದರು. ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಆರೋಗ್ಯದ ಕಾರಣ ನೀಡಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಹಿಂದೂಸ್ತಾನಿ ಅವಾಮ್ ಮೋರ್ಚಾ-ಸೆಕ್ಯುಲರ್ ಸಂಸ್ಥಾಪಕ ಜಿತನ್ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ಯುಪಿ ಸಚಿವ ಮತ್ತು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭರ್, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮುಂತಾದ ನಾಯಕರು ಕೂಡ ಹಾಜರಿದ್ದರು.