ಡೈಲಿ ವಾರ್ತೆ : 12 ಮೇ 2022

ಲಕ್ನೋ : ತಾಜ್ ಮಹಲ್ ಒಳಗಿರುವ 22 ಮುಚ್ಚಿದ ಬಾಗಿಲನ್ನು ಹೊರ ತೆಗೆಯಲು ಅನುಮತಿ ನೀಡಬೇಕೆಂಬ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ ವಜಾ ಮಾಡಿದೆ. ಇದಲ್ಲದೆ, ಇತಿಹಾಸದ ವಿಚಾರಗಳನ್ನು ಅರಿಯಲು ಕೋರ್ಟಿಗೆ ಪಿಐಎಲ್‌ ಅರ್ಜಿ ಹಾಕುವ ಪದ್ಧತಿಯನ್ನು ಕೈಬಿಡಿ. ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಅಧ್ಯಯನ ಕೈಗೊಳ್ಳಿ ಎಂದು ಪರೋಕ್ಷವಾಗಿ ನ್ಯಾಯಾಧೀಶರು ಕಿಡಿಕಾರಿದ್ದಾರೆ.

ತಾಜ್ ಮಹಲಿನ 22 ಮುಚ್ಚಿದ ಬಾಗಿಲನ್ನು ಹೊರತೆಗೆದು, ಹುದುಗಿ ಹೋಗಿರುವ ಸತ್ಯಗಳನ್ನು ಬಹಿರಂಗ ಮಾಡಬೇಕು ಎಂಬುದಾಗಿ ಬಿಜೆಪಿಯ ಅಯೋಧ್ಯಾ ಘಟಕದ ಮಾಧ್ಯಮ ಪ್ರಮುಖ್ ರಜನೀಶ್ ಸಿಂಗ್ ಹೈಕೋರ್ಟಿನ ಲಕ್ನೋ ಬೆಂಚ್ ಗೆ ಅರ್ಜಿ ಸಲ್ಲಿಸಿದ್ದರು. ಕೆಲವು ಇತಿಹಾಸಕಾರರು ಮತ್ತು ಹಿಂದು ಸಂಘಟನೆಗಳು ತಾಜ್ ಮಹಲ್ ಎಂದರೆ, ತೇಜೋ ಮಹಲ್ ಆಗಿತ್ತು. ಅದು ಹಳೆಯ ಶಿವಾಲಯ ಆಗಿತ್ತು ಎಂದು ಹೇಳುತ್ತಿವೆ. ಇದರ ನಡುವೆಯೇ, ಹೈಕೋರ್ಟ್ ಪೀಠಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಈ ಬಗ್ಗೆ ಅಧ್ಯಯನ ಕೈಗೊಳ್ಳಲು ವಿಶೇಷ ಸಮಿತಿಯೊಂದನ್ನು ರಚಿಸಲು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಗೆ ಆದೇಶ ನೀಡಬೇಕು ಎಂದು ಕೋರಲಾಗಿತ್ತು. ಅಲ್ಲದೆ, ನಾವು ತಾಜ್ ಮಹಲನ್ನು ದೇವಸ್ಥಾನ ಮಾಡುವ ಇರಾದೆಯನ್ನು ಹೊಂದಿಲ್ಲ. ಆದರೆ ಹುದುಗಿರುವ ಸತ್ಯವನ್ನು ಹೊರಗೆ ತರಬೇಕು. ಸಮಾಜದಲ್ಲಿ ಸಾಮರಸ್ಯ ಉಳಿಯಲು ಜನರು ಸತ್ಯ ತಿಳಿಯುವಂತಾಗಬೇಕು. ಅದಕ್ಕಾಗಿ ಮುಚ್ಚಿದ ಕೋಣೆಗಳನ್ನು ಹೊಕ್ಕು ಸಂಶೋಧನೆ ನಡೆಸಲು ಅವಕಾಶ ನೀಡಬೇಕು ಎಂದು ರಜನೀಶ್ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದರು.

ದ್ವಿಸದಸ್ಯ ಪೀಠದಲ್ಲಿದ್ದ ಡಿ.ಕೆ.ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ, ಈ ಕುರಿತ ಅರ್ಜಿಯ ಔಚಿತ್ಯವನ್ನು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಕಾನೂನುಗಳನ್ನು ಆಧರಿಸಿ ತೀರ್ಪು ಕೊಡುತ್ತದೆ. ಆದರೆ ನೀವು ಕಾನೂನಿನಡಿ ಆದೇಶ ಕೋರುವುದಿದ್ದರೆ, ಯಾವುದಾದ್ರೂ ಹಕ್ಕುಗಳಿಗೆ ಕೊರತೆ ಬಂದಿರಬೇಕು ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಯಾವ ರೀತಿಯ ತೀರ್ಪನ್ನು ನಮ್ಮಿಂದ ಬಯಸುತ್ತಿದ್ದೀರಿ? ತಾಜ್ ಮಹಲನ್ನು ಕಟ್ಟಿದ್ದು ಯಾರೆಂದು ಕೇಳುತ್ತೀರಾ..? ಸಂವಿಧಾನದಡಿ ಆದೇಶ ಕೊಡಬೇಕಿದ್ದರೆ, ನೀವು ಏನಾದ್ರೂ ಹಕ್ಕುಗಳನ್ನು ಕಳಕೊಂಡಿರಬೇಕು. ನೀವು ಯಾವ ರೀತಿಯಲ್ಲಿ ಹಕ್ಕನ್ನು ಅಭವಿಸಲು ಸಮಸ್ಯೆ ಹೊಂದಿದ್ದೀರಿ ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು, ಭದ್ರತಾ ನೆಪವೊಡ್ಡಿ ತಾಜ್ ಮಹಲಿನ 22 ಮುಚ್ಚಿದ ಬಾಗಿಲುಗಳನ್ನು ಹೊರ ತೆಗೆಯಬೇಕು. ಭದ್ರತಾ ಕಾರಣಕ್ಕೆ ಮುಚ್ಚಿರುವ ಹಿಂದಿನ ಸತ್ಯವನ್ನು ತಿಳಿಯಲು ಜನರಿಗೆ ಅವಕಾಶ ಮಾಡಬೇಕು. ಇದಕ್ಕಾಗಿ ಸತ್ಯ ಶೋಧನಾ ಸಮಿತಿಯನ್ನು ರಚಿಸಬೇಕು ಎಂದು ಕೇಳಿಕೊಂಡಿದ್ದಾರೆ. ಅರ್ಜಿದಾರರ ಪ್ರಶ್ನೆಗಳಿಗೆ ಗರಂ ಆದ ನ್ಯಾಯಾಧೀಶರು, ಈ ರೀತಿಯ ಪ್ರಶ್ನೆಗಳನ್ನು ಕೇಳಿ ನಮ್ಮಿಂದ ಉತ್ತರ ಕೇಳಲು ನೀವು ಯಾರು..? ನಿಮಗೆ ಅಲ್ಲಿನ ಮುಚ್ಚಿದ ಬಾಗಿಲುಗಳ ಬಗ್ಗೆ ಕುತೂಹಲ ಇದ್ದರೆ, ಸಂಶೋಧನೆ ನಡೆಸಿ, ಎಂ.ಎ, ಪಿಎಚ್ ಡಿ ಮಾಡುವ ಮೂಲಕ ಅಲ್ಲಿನ ಸತ್ಯಗಳನ್ನು ತಿಳಿದುಕೊಳ್ಳಿ, ಇಂಥದಕ್ಕೆಲ್ಲ ಪಿಐಎಲ್ ಸಲ್ಲಿಸಿ ಕೋರ್ಟನ್ನು ಅಪಹಾಸ್ಯ ಮಾಡಬೇಡಿ. ಇದೇ ರೀತಿ ಅರ್ಜಿ ಹಾಕುವುದಾದರೆ, ನಾಳೆ ನಮ್ಮ ಚೇಂಬರ್ ಒಳಗಡೆ ಚೆಕ್ ಮಾಡಲು ಅವಕಾಶ ಕೇಳಬಹುದು. ಈ ರೀತಿ ಅರ್ಜಿ ಸಲ್ಲಿಸಿ ಪಿಐಎಲ್
ಪದ್ಧತಿಯನ್ನು ಅಣಕಿಸಬೇಡಿ ಎಂದು ನ್ಯಾಯಾಧೀಶರು ಹೇಳಿದ್ದಲ್ಲದೆ, ತಾಜ್ ಮಹಲ್ ಕುರಿತ ಅರ್ಜಿಯನ್ನು ವಜಾ ಮಾಡಿದ್ದಾರೆ.

ಅರ್ಜಿದಾರರು ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕುವುದಾಗಿ ಹೇಳಿಕೊಂಡಿದ್ದಾರೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಬಗ್ಗೆ ಅನೇಕರಲ್ಲಿ ಕುತೂಹಲ ಇದೆ. ಅದು ಶಾಜಹಾನ್ ಕಟ್ಟಿಸಿದ್ದಲ್ಲ. ಅದಕ್ಕೂ ಹಿಂದೆಯೇ ಆ ಕಟ್ಟಡ ಇತ್ತು. ಹಿಂದೆ ಶಿವ ದೇವಾಲಯ ಆಗಿತ್ತು. ಮೊಘಲರ ಕಾಲದಲ್ಲಿ ದೇವಸ್ಥಾನವನ್ನೇ ಸುಂದರವಾದ ಮಸೀದಿ ರೂಪದಲ್ಲಿ ಹೊಸತಾಗಿ ಮಾಡಲಾಗಿತ್ತು ಎನ್ನುವ ಐತಿಹ್ಯಗಳಿವೆ. ಆದರೆ, ಇತಿಹಾಸದಲ್ಲಿ ಶಾಜಹಾನ್ ತನ್ನ ಮಡದಿಯ ಪ್ರೀತಿಯ ಸಂಕೇತವಾಗಿ ತಾಜ್ ಮಹಲ್ ಕಟ್ಟಿದ್ದ ಎಂದು ತೋರಿಸಲಾಗಿತ್ತು. ಆದರೆ, ಕಟ್ಟಡದ ಒಳಗೆ 22 ಮುಚ್ಚಿದ ಕೋಣೆಗಳಿದ್ದು, ಅದರಲ್ಲಿ ತಾಜ್ ಮಹಲಿನ ಹಿಂದಿನ ನೈಜ ಕತೆಗಳಿವೆ ಎಂಬ ಬಗ್ಗೆ ಕೆಲವರು ಹೇಳುತ್ತಿದ್ದಾರೆ. ಇದೇ ಕಾರಣದಿಂದ ತಾಜ್ ಮಹಲ್ ಕಟ್ಟಡದ ಬಗ್ಗೆ ಸತ್ಯ ಶೋಧನೆಗೆ ಅವಕಾಶ ಕೊಡಬೇಕು ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.