ಡೈಲಿ ವಾರ್ತೆ : 29 ಜೂನ್ 2022

ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಉಡುಪಿ ಜಿಲ್ಲೆ ಇದರ ವತಿಯಿಂದ 2021 – 22 ನೇ ಸಾಲಿನ “ಸ್ವಚ್ಛ ವಿದ್ಯಾಲಯ ಪುರಸ್ಕಾರ” ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ದಿನಾಂಕ 28 ರಂದು ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ವಹಿಸಿದ್ದರು.

ಜಿಲ್ಲೆಯ ಒಟ್ಟು ಸಾವಿರದ ನೂರಕ್ಕೂ ಹೆಚ್ಚು ಪ್ರಾಥಮಿಕ ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 628 ಶಾಲೆಗಳು ಆನ್ ಲೈನ್ ನಲ್ಲಿ ಪ್ರಶಸ್ತಿಗಾಗಿ ನೋಂದಾಯಿಸಿಕೊಂಡಿದ್ದು , ಮೂವತ್ತೆಂಟು ಶಾಲೆಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಕಾಳಾವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಚ್ಚತೆ ನಿರ್ವಹಣೆ ವಿಭಾಗದಲ್ಲಿ 94 ಶೇಕಡಾ ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆದಿದ್ದು ಶಾಲೆಯ ಮುಖ್ಯೋಪಾಧ್ಯಾಯ ವಕ್ವಾಡಿ ವೇಣು ಗೋಪಾಲ್ ಹೆಗ್ಡೆ ,ಎಸ್ ಡಿಎಂಸಿ ಅಧ್ಯಕ್ಷ ಸತೀಶ್ ಜೋಗಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಅಪರ ಜಿಲ್ಲಾಧಿಕಾರಿಗಳಾದ ವೀಣಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.