ಡೈಲಿ ವಾರ್ತೆ: 20/ಮೇ /2024
ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಎಚ್‌ಡಿ ರೇವಣ್ಣಗೆ ಜಾಮೀನು, ಮಂಜೂರು!
ಬೆಂಗಳೂರು : ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣಗೆ ಮತ್ತೊಂದು ರಿಲೀಫ್ ಸಿಕ್ಕಿದ್ದು, ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್‌ಡಿ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ ಪ್ರೀತ್ ಅವರು ಜಾಮೀನು ನೀಡಿದ್ದಾರೆ. 5 ಲಕ್ಷ ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸುವ ಷರತ್ತಿನೊಂದಿಗೆ ಎಚ್‌ಡಿ ರೇವಣ್ಣ ಅವರಿಗೆ ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಈಗಾಗಲೇ ಕೆಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದ ಎಚ್‌ಡಿ ರೇವಣ್ಣ ಅವರಿಗೆ ಈಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದು ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಅರ್ಜಿ ಸಂಬಂಧ ಶುಕ್ರವಾರ ವಾದ – ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಅದರಂತೆ ಇದೇ ಕೇಸ್‌ನಲ್ಲಿ ರೇವಣ್ಣ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನೂ ಸೋಮವಾರದವರೆಗೆ ವಿಸ್ತರಿಸಿತ್ತು. ಈಗ ಎಚ್‌ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಕಲ್ಪಿಸಿದೆ.