ಡೈಲಿ ವಾರ್ತೆ : 06 ಜುಲೈ 2022

ಎಂ.ಆರ್.ಮಾನ್ವಿ
ಲೇಖಕರು: ಶಿಕ್ಷಕರು ಹಾಗು ಪತ್ರಕರ್ತರು

ಹಜ್; ವಿಶ್ವಮಾನ ಸಂದೇಶ ಸಾರುವ ಜಾಗತಿಕ ಸಮ್ಮೇಳನ
(ದಿ. 10/07/2022 ರಂದು ಆಚರಿಸಲ್ಪಡುವ ಈದುಲ್ ಅಝ್ಹಾ (ಬಕ್ರೀದ್ ಹಬ್ಬ)ದ ನಿಮಿತ್ತ ವಿಶೇಷ ಲೇಖನ)
ಜಾಗತಿಕ ಮುಸ್ಲಿಮ್ ಸಮುದಾಯದ ಆರಾಧನಾ ಕೇಂದ್ರವಾಗಿರುವ ಕಾಅಬಾ ಭವನ ಸೌದಿ ಅರೆಬಿಯಾದ ‘ಮಕ್ಕಾ’ ನಗರದಲ್ಲಿದೆ. ಇದನ್ನು ‘ನಗರಗಳ ರಾಣಿ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಭೂಮಿಯ ಮೇಲಿನ ಮೊದಲ ಮಾನವ ವಸಾಹತು. ಮಕ್ಕಾ ಭೂಮಿಯ ಮೇಲೆ ಮಗು ಜನಿಸಿದ ಮೊದಲ ಸ್ಥಳವಾಗಿದೆ. ನಿರ್ಜನ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಇಬ್ರಾಹಿಂ ಪ್ರವಾದಿ ತಮ್ಮ ಪುಟ್ಟ ಮಗು ಇಸ್ಮಾಯಿಲ್ ಮತ್ತು ಪತ್ನಿಯನ್ನು ಬಿಟ್ಟು ಹೋಗಿದ್ದ ಪ್ರದೇಶ ಅದು. ನಂತರದಲ್ಲಿ ಅದು ಜನವಸತಿ ಪ್ರದೇಶವಾಯಿತು. ತಂದೆ ಮತ್ತು ಮಗ ಸೇರಿ ಇಲ್ಲಿ ಕಾಬಾ ಭವನ ನಿರ್ಮಿಸಿದರು. ಅದುವೆ ಮುಂದಿನ ದಿನಗಳಲ್ಲಿ ಜಾಗತಿಕ ಮುಸ್ಲಿಮರ ಆರಾಧನಾ ಕೇಂದ್ರವಾಯಿತು. ಸೃಷ್ಟಿಕರ್ತನು ಭೂಮಿಯ ಮೇಲೆ ತನ್ನ ಪ್ರಥಮ ಆರಾಧಾನಾಲಯವನ್ನು ನಿರ್ಮಿಸಲು ಆಯ್ಕೆ ಮಾಡಿಕೊಂಡ ಏಕೈಕ ಸ್ಥಳವಾಗಿತ್ತು ಮಕ್ಕಾದ ಕಾಬಾ ಭವನ.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅತಿ ಕಡಿಮೆ ಸಂಖ್ಯೆ ಜನರಿಗೆ ಮಾತ್ರ ಅವಕಾಶ ನೀಡುತ್ತಿದ್ದ ಸೌದಿ ಸರ್ಕಾರ ಈ ವರ್ಷ(2022) ಒಂದು ಮಿಲಿಯನ್ ಜನರಿಗೆ ಹಜ್ ನಿರ್ವವಹಿಸಲು ಅವಕಾಶ ನೀಡಿದೆ. ಇದರಲ್ಲಿ79237 ಭಾರತೀಯ ಯಾತ್ರಿಗಳೂ ಸೇರಿದ್ದಾರೆ.


ಜಾಗತಿಕ ಜನಸಂಖ್ಯೆ ಸುಮಾರು ಕಾಲುಭಾಗದಷ್ಟು ಇರುವ ಮುಸ್ಲಿಮರಿಗೆ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಅನ್ನು ನಿರ್ವಹಿಸುವುದು ಅವರ ಐದು ಧಾರ್ಮಿಕ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ ಇದು ಎಲ್ಲರಿಗೂ ಕಡ್ಡಾಯವಾಗಿರದೆ ಯಾರು ಅನುಕೂಲಸ್ಥರಿರುತ್ತಾರೋ ಅವರಿಗೆ ಮಾತ್ರ ಕಡ್ಡಾಯ ಕರ್ಮವಾಗಿದೆ. ವಿಶ್ವದ ಅತಿದೊಡ್ಡ ಮಾನವ ಕೂಟವೆಂದೇ ಪರಿಗಣಿಸಲಾಗಿರುವ ಹಜ್ ಯಾತ್ರೆ ಇತರ ಧಾರ್ಮಿಕ ಯಾತ್ರೆಗಳಂತೆ ನೈತಿಕ ಮತ್ತು ಆಧ್ಯಾತ್ಮಿಕತೆಯನ್ನು ಉತ್ತೇಜಿಸುವ ಮತ್ತು ಮನುಷ್ಯ ಮತ್ತು ದೇವನೊಂದಿಗೆ ಸಂಪರ್ಕವನ್ನು ನಿಕಟಗೊಳಿಸುವ ಒಂದು ಪ್ರಕ್ರಿಯೆಯಾಗಿದೆ ಎಂದು ನಂಬಲಾಗಿದೆ.
ಇಸ್ಲಾಮಿನಲ್ಲಿ ಕೇವಲ ಎರಡು ಮಾತ್ರ ಹಬ್ಬಗಳಿವೆ. ಒಂದು ೩೦ ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತೊಂದು ಹಿಜರಿ ಕ್ಯಾಲಂಡರಿನ ಜಿಲ್-ಹಿಜ್ಜಾ ತಿಂಗಳಿನ ೯ ಮತ್ತು ೧೦ ನೇ ದಿನದಂದು ನಡೆಯುವ ಈದುಲ್ ಅದ್ಹಾ ಆಥವಾ ಬಕ್ರೀದ್ ಹಬ್ಬ. ದೇವನ ಆದೇಶವನ್ನು ಪಾಲಿಸಲು ಮುಂದಾದ ಪ್ರವಾದಿ ಇಬ್ರಾಹೀಮರು ತಮ್ಮ ಪುತ್ರ ಹ. ಇಸ್ಮಾಯಿಲರನ್ನು ಬಲಿಯರ್ಪಿಸಲು ಹೋದಾಗ ಅಲ್ಲಿ ಒಂದು ಮೇಕೆ ಪ್ರತ್ಯಕ್ಷಗೊಂಡು ಪುತ್ರನ ಬದಲಿಗೆ ಮೇಕೆ ಬಲಿಯರ್ಪಿಸಿದ ಸ್ಮರಣೆಗಾಗಿ ಈ ಈದ್ ದಿನದಂದು ಮೇಕೆ, ಎತ್ತು, ಎಮ್ಮೆ ಕೋಣ, ಒಂಟೆಗಳನ್ನು ಬಲಿ ನೀಡಲಾಗುತ್ತದೆ. ಅಲ್ಲದೆ ಇಡಿ ಜಗತ್ತಿನ ಮುಸ್ಲಿಮ್ ಸಮುದಾಯ ಕಾಬಾ ಭವನ ಸಂದರ್ಶಿಸಲು ಹಜ್ ಯಾತ್ರೆ ನಿರ್ವಹಿಸುತ್ತಾರೆ.


ಸಾಮಾನ್ಯವಾಗಿ ಬಲಿಯರ್ಪಣೆ ಎಂಬುದು ಎಲ್ಲ ಧರ್ಮಗಳಲ್ಲಿ ಆಚರಿಸಲ್ಪಡುವ ಒಂದು ಆರಾಧನೆ. ಆದರೆ ಇತ್ತಿಚೆಗೆ ಭಾರತದಲ್ಲಿ ಸರ್ಕಾರ ಪ್ರಾಣಿ ಬಲಿಗಳನ್ನು ಪ್ರೋತ್ಸಾಹಿಸುತ್ತಿಲ್ಲ. ಅದರಲ್ಲೂ ಎತ್ತು ಎಮ್ಮೆ, ಕೋಣಗಳನ್ನು ಕಡಿಯುವುದು, ಬಲಿ ನೀಡಿವುದನ್ನು ನಿಷೇಧಿಸಿವೆ. ಈ ಎಲ್ಲ ಅಡೆತಡೆಗಳ ನಡುವೆಯೂ ಬಕ್ರೀದ್ ಸಂದರ್ಭದಲ್ಲಿ ಕುರಿ, ಮೇಕೆ, ಕೋಣಗಳ ಬಲಿ ನಡೆಯುತ್ತದೆ. ಏಕೆಂದರೆ ಇದು ಜಾಗತಿಕ ಮುಸ್ಲಿಮರ ಧಾರ್ಮಿಕ ವಿಶ್ವಾಸದ ಒಂದು ಅವಿಭಾಜ್ಯ ಅಂಗ. ಪ್ರಾಣಿ ಬಲಿ ಕುರಿತಂತೆ ಕುರ್‌ಆನ್ ಸ್ಪಷ್ಟವಾಗಿ ಉಲ್ಲೇಖಿಸಿದ್ದು ಅದು ಈ ರೀತಿಯಾಗಿದೆ. “ಖಂಡಿತವಾಗಿಯೂ ಪ್ರಾಣಿಗಳ ಮಾಂಸವಾಗಲಿ, ರಕ್ತವಾಗಲಿ, ದೇವನಿಗೆ ತಲುಪದು. ಆದರೆ ನಿಮ್ಮ ಭಯಭಕ್ತಿ ಮಾತ್ರ ತಲುಪುವುದು. ಅಲ್ಲಾಹನು ನಿಮಗೆ ಮಾರ್ಗದರ್ಶನ ಮಾಡಿವುದರಿಂದ ನೀವು ಅವನ ಮಹತ್ವ ಕೊಂಡಾಡಲು ಹೀಗೆ ಅವುಗಳನ್ನು ನಿಮಗೆ ಅಧೀನಪಡಿಸಿರುವನು.”
ಈ ಹಜ್ ಯಾತ್ರೆ ವಿಶ್ವಮಾನವ ಸಮ್ಮೇಳನವಾಗಿದ್ದು ಪ್ರವಾದಿ ಮುಹಮ್ಮದ್ ಪೈಗಂಬರರು ಹಿ.ಶ.೧೦ರಲ್ಲಿ (ಮಾರ್ಚ್೨, ೬೩೨) ತಮ್ಮ ಕೊನೆಯ ಹಜ್ ಯಾತ್ರೆ ನಿರ್ವಹಿಸಿ ಯಾತ್ರಿಕರನ್ನುದ್ದೇಶಿಸಿ ಅಂತಿಮ ಭಾಷಣೆ ಮಾಡುತ್ತಾರೆ. ಅದು ಪ್ರವಾದಿಯ ವಿದಾಯ ಭಾಷಣ ಎಂದೂ ಕರೆಯಲ್ಪಡುತ್ತದೆ. ಜಗತ್ತಿನ ಎಲ್ಲ ಭಾಷೆಗಳಲ್ಲೂ ಅದು ಲಭ್ಯವಿದೆ. ಆ ಭಾಷಣದ ಕೆಲವು ಅಂಶಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಈ ಆಧಾರದ ಮೇಲೆ ನಿಜಕ್ಕೂ ಇದೊಂದು ವಿಶ್ವಮಾನವ ಸಂದೇಶವಾಗಿದೆ ಎನ್ನುವುದು ಎಲ್ಲರ ಅರಿವೆಗೆ ಬರಬಹುದು.
೨೦ನೇ ಶತಮಾನದಲ್ಲಿ ರಾಷ್ಟçಕವಿ ಕುವೆಂಪು ರವರು “ಓ ನನ್ನ ಚೇತನ ಆಗು ನೀ ಅನಿಕೇತನ’ ಎಂಬ ವಿಶ್ವಮಾನವ ಸಂದೇಶ ನೀಡಿದರೆ, ೬ನೆ ಶತಮಾನದಲ್ಲೇ ಪ್ರವಾದಿ ಮುಹಮ್ಮದ್ ಪೈಬಂಗರರು ತಮ್ಮ ಕೊನೆಯ ಹಜ್ ಯಾತ್ರೆಯ ಸಂದರ್ಭದಲ್ಲಿ ಅರಫಾತ್ ನ ಮೈದಾನದಲ್ಲಿ ಜಾಗತಿಕ ಮಾನವರನ್ನುದ್ದೇಶಿಸಿ ವಿಶ್ವಮಾನವ ಸಂದೇಶ ನೀಡಿದ್ದು ಒಂದು ಅದ್ಬುತವೇ ಸರಿ.
ಅದರ ಕೆಲವು ಅಂಶಗಳು ಹಿಗಿವೆ…
“ಜನರೇ, ನನ್ನ ಮಾತುಗಳನ್ನು ಚೆನ್ನಾಗಿ ಆಲಿಸಿರಿ. ಈ ವರ್ಷದ ಬಳಿಕ ನಾವು ಪರಸ್ಪರ ಇಲ್ಲಿ ಬೇಟಿಯಾಗುತ್ತೇವೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಮುಂದಿನ ವರ್ಷದ ಹಜ್ಜ್ ನಿರ್ವಹಿಸಲು ನಾನಿರುತ್ತೇನೋ ಇಲ್ಲವೋ ಎಂದೂ ನನಗೆ ತಿಳಿಯದು. ಜನರೇ, ಖಂಡಿತವಾಗಿಯೂ ಅಲ್ಲಾಹನು ಈ ರೀತಿ ಹೇಳಿರುವನು: ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಪಡುವಂತಾಗಲಿಕ್ಕಾಗಿದೆ. ಖಂಡಿತವಾಗಿಯು ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನಾಗಿರುವನು. ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯ ಮೇಲೆ ಯಾವುದೇ ಮೇಲ್ಮೆ ಇಲ್ಲ. ಧರ್ಮನಿಷ್ಠೆ ಮತ್ತು ಧೇವಭಕ್ತಿಯ ಹೊರತು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು.
ತಿಳಿಯಿರಿ! ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು. ತಿಳಿಯಿರಿ! ಅಜ್ಞಾನ ಕಾಲದ ಎಲ್ಲ ಸಂಪ್ರದಾಯಗಳು ನನ್ನ ಪಾದಗಳಡಿಯಲ್ಲಿವೆ. ಅಜ್ಞಾನ ಕಾಲದ ಎಲ್ಲ ಕೊಲೆಯ ಪ್ರತೀಕಾರಗಳನ್ನು ಅನೂರ್ಜಿತ ಗೊಳಿಸಲಾಗಿದೆ. ಅಜ್ಞಾನ ಕಾಲದ ಎಲ್ಲ ಬಡ್ಡಿಗಳನ್ನು ಮನ್ನಾ ಮಾಡಲಾಗಿದೆ. ಹೀಗೆ ಮುಂದುವರೆದು, ಪತಿ-ಪತ್ನಿಯರ ಹಕ್ಕುಗಳು, ಅನಾಥರ ಹಕ್ಕು, ಸಂಬಂಧಿಕರ ಹಕ್ಕುಗಳು, ಮಹಿಳೆಯರ ಸ್ಥಾನ ಮತ್ತು ಅವರ ಹಕ್ಕು, ಸಾಮಾಜಿಕ ನ್ಯಾಯ, ಸಾಮಾಜಿಕ ಅಪರಾಧ, ಕೊಲೆ,ಸುಲಿಗೆ, ಅನ್ಯಾಯ, ಅತ್ಯಾಚಾರ ಹೀಗೆ ಪ್ರತಿಯೊಂದು ವಿಷಯದ ಕುರಿತಂತೆ ಯಾವ ರೀತಿಯಾಗಿ ನಾವು ಅದನ್ನು ನಿಭಾಯಿಸಬೇಕು ಎಂಬಂತೆ ಸುಧೀರ್ಘ ಭಾಷಣವನ್ನು ಮಾಡಿದ್ದು, ಸಾವಿರದ ನಾಲ್ಕು ನೂರ ವರ್ಷಗಳ ಹಿಂದೆಯೇ ಪ್ರವಾದಿ ಮುಹಮ್ಮದ್ ಪೈಗಂಬರರು ಎಷ್ಟೊಂದು ದೂರದೃಷ್ಟಿ ಹೊಂದಿದ್ದರು ಎಂಬುದು ಅದನ್ನು ಓದಿದ ಎಲ್ಲರಿಗೂ ಮನವರಿಕೆಯಾಗುತ್ತದೆ.