ಡೈಲಿ ವಾರ್ತೆ: 16/ಮೇ /2024

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ 4 ಮಂದಿಯ ಬಂಧನ

ಮಂಗಳೂರು:  ಬೆಂಗಳೂರಿನಿಂದ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಕಾರನ್ನು ಪತ್ತೆ ಹಚ್ಚಿ ಕಾರಿನಲ್ಲಿದ್ದ ಬಿಜೈ ನ್ಯೂರೋಡ್‌ನ‌ ಮೊಹಮ್ಮದ್‌ ಅಮೀನ್‌ ರಾಫಿ (23), ಅಡ್ಡೂರಿನ ಮೊಹಮ್ಮದ್‌ ಸಿನಾನ್‌ ಅಬ್ದುಲ್ಲಾ (23), ಬಂದರಿನ ಮೊಹಮ್ಮದ್‌ ನೌಮಾನ್‌ (22) ಮತ್ತು ಬೋಳಿಯಾರ್‌ನ ಮೊಹಮ್ಮದ್‌ ಸಫೀಲ್‌ (23)ನನ್ನು ವಶಕ್ಕೆ ಪಡೆದುಕೊಂಡರು.
ಅವರ ವಶದಿಂದ 6,50,000 ರೂ ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್‌, ಕಾರು, ಡಿಜಿಟಲ್‌ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಅಂದಾಜು 14,85,500 ರೂ.ಗಳಾಗಿವೆ.

ಆರೋಪಿಗಳ ಪೈಕಿ ಮೊಹಮ್ಮದ್‌ ಅಮೀನ್‌ ರಾಫಿ ವಿರುದ್ಧ ಈ ಹಿಂದೆ 2021ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ಎಚ್‌. ಎಂ., ಪಿಎಸ್‌ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.
ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಾಟ ಆರೋಪಿಗಳು ಡ್ರಗ್ಸ್ಅನ್ನು ಬೆಂಗಳೂರಿನಿಂದ ಖರೀದಿಸಿ ಮಂಗಳೂರು, ಕೇರಳದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.