ಡೈಲಿ ವಾರ್ತೆ : 30 ಆಗಸ್ಟ್ 2022

ಬಿಜೆಪಿ ಕಾಂಗ್ರೆಸ್ ನಡುವೆ ಹೊಯ್‌ಕೈ: ಸಭೆಯಿಂದ ಹೊರ ನಡೆದ ಸಂಸದ ರಾಘವೇಂದ್ರ

ಭದ್ರಾವತಿ: ನಗರಸಭೆಯಲ್ಲಿ ಮಂಗಳವಾರ ಸಂಸದರು ಮತ್ತು ಶಾಸಕರು ಒಟ್ಟಾಗಿ ಭದ್ರಾ ನದಿಯ ತಗ್ಗು ಪ್ರದೇಶದ ಕವಲಗುಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.

ಸಂಸದರು ಹಬ್ಬದ ಶುಭಾಷಯ ಕೋರಿ ಮಾತನಾಡಿದ ನಂತರ, ಶಾಸಕ ಬಿ.ಕೆ. ಸಂಗಮೇಶ್ ಮಾತನಾಡುತ್ತಾ ಜಿಲ್ಲೆಯ ಬೇರೆ ಕ್ಷೇತ್ರಕ್ಕೆ ನೀಡಿದಂತೆ ವಿಶೇಷ ಅನುದಾನ ನೀಡಿಲ್ಲ, ಅಮೃತ್ ಯೋಜನೆಯು ಪ್ರಕಟವಾಗಿಲ್ಲ ಎಂದು ಮಾತನಾಡುವಾಗಲೇ ಬಿಜೆಪಿಯ ಬಿ.ಕೆ.ಶ್ರೀನಾಥ್, ಧರ್ಮಪ್ರಸಾದ್, ಮುಂಗೋಟೆ ರುದ್ರೇಶ್, ಜಿ.ಆನಂದ್‌ಕುಮಾರ್ ಮುಂತಾದವರು ಇಲ್ಲಿ ಆಗುತ್ತಿರುವ ಎಲ್ಲಾ ಅಭಿವೃದ್ದಿ ಕಾರ್ಯಗಳು ರಾಘಣ್ಣ ನೀಡಿದ ಅನುದಾನ ಹಣದಿಂದ ಆಗುತ್ತಿದೆ ಎಂದಾಗ, ಮಧ್ಯದಲ್ಲಿ ಬಾಯಿ ಹಾಕಲು ನೀವ್ಯಾರು, ಸಂಸದರಿಗೆ ನಾವು ಮನವಿ ಮಾಡುತ್ತಿದ್ದೇವೆಂದು ಶಾಸಕರು ಹೇಳಿದರು.
ಆಗ ಇತರರೆ ಬಿಜೆಪಿಯವರು ಗಟ್ಟಿ ಧ್ವನಿಯಲ್ಲಿ ಅಡ್ಡಿ ಪಡಿಸಿದರು.

ಶಾಸಕರ ಸಹೋದರ ನಗರಸಭಾ ಸದಸ್ಯ ಬಿ.ಕೆ.ಮೋಹನ್, ಸಂಸದರಲ್ಲಿ ಶಾಸಕರು ಮನವಿ ಮಾಡುತ್ತಾ ಮಾತನಾಡುವಾಗ ನೀವು ಯಾರ್ರಿ ತಲೆ ಹಾಕಲು, ಕೇವಲ ನಗರಸಭಾ ಸದಸ್ಯರ ಸಭೆ ಮಾಡಬೇಕಿತ್ತು, ನಿಮ್ಮನ್ನು ಸಭೆಗೆ ಒಳ ಬಿಟ್ಟಿದ್ದೇ ತಪ್ಪಾಗಿದೆ, ಎಂದಾಗ ಹೊರಗೆ ಹೋಗಿ ಎಂದರೆ ಹೋಗುತ್ತೇವೆ ಹೇಳ್ರಿ, ಇಂಹತ ದರ್ಪದ ಮಾತುಗಳಾಡಬೇಡಿ ಎಂದು ಏರು ಧ್ವನಿಯಲ್ಲಿ ಕೂಗಾಡಿದರು. ಬಿಜೆಪಿ ಕದಿರೇಶ್, ರವಿಕುಮಾರ್, ಕರೀಗೌಡ, ಕೆ.ಮಂಜುನಾಥ್, ಕಾಂಗ್ರೇಸ್‌ನ ಶ್ರೇಯಸ್, ಮಂಜುನಾಥ್, ಬಿ.ಟಿ.ನಾಗರಾಜ್, ಗಂಗಾಧರ್, ಅಮೀರ್‌ಜಾನ್, ಬಿ.ಕೆ.ಮೋಹನ್ ಮುಂತಾದವರ ನಡುವೆ ಒಬ್ಬರನ್ನೊಬ್ಬರು ತಳ್ಳಾಡುತ್ತಾ ಹೊಯ್‌ಕೈ ಮಿಲಾಯಿಸುವ ಹಂತ ತಲುಪಿತು. ಸಂಸದರು ಎಷ್ಟೇ ಸಮಜಾಯಿಸಿ ಶಾಂತಿಗೆ ಕರೆ ನೀಡಿದರೂ ಪರಿಸ್ಥಿತಿ ತಣ್ಣಗಾಗಿಲ್ಲ. ಆಗ ಶಾಸಕರು ಮೂಲ್ನಾಲ್ಕು ಜನರಿಂದ ನಿಮಗೆ ಕೆಟ್ಟ ಹೆಸರು ಬರುತ್ತಿದೆ ಅವರೇ ನಿಮ್ಮನ್ನು ಹಾಳು ಮಾಡೋದು ಎಂದಾಗ ಪುನಹ ಇನ್ನು ಹೆಚ್ಚಿನ ಕಿತ್ತಾಟ ತಳ್ಳಾಟವಾಗಿ ಸಂಸದ ರಾಘವೇಂದ್ರ ರವರು ಸಭೆಯಿಂದ ನಿರ್ಗಮಿಸಿದರು.