ಡೈಲಿ ವಾರ್ತೆ : 30 ಆಗಸ್ಟ್ 2022

ಉಡುಪಿ ಯಕ್ಷಗಾನ ಕೇಂದ್ರದಿಂದ ಬನ್ನಂಜೆ ಸಂಜೀವ ಸುವರ್ಣ ರಾಜೀನಾಮೆ

ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸುಮಾರು ಐವತ್ತು ವರ್ಷಗಳಿಂದಲೂ ಇದ್ದ ಸುಮಾರು ನಲವತ್ತು ವರ್ಷಗಳಷ್ಟು ಗುರುವಾಗಿ ಕೇಂದ್ರವನ್ನು ಮುನ್ನಡೆಸುತ್ತಿದ್ದ ಗುರು ಬನ್ನಂಜೆ ಸಂಜೀವ ಸುವರ್ಣರು ಇನ್ನು ಕೇಂದ್ರವನ್ನು ಬಿಡುತ್ತಿದ್ದಾರೆ.

ಸತತವಾಗಿ ಕೇಂದ್ರದಲ್ಲಿ ನೆಲೆಯಾಗಿ ಇದ್ದು ತನ್ನ ಬದುಕನ್ನೇ ಮುಡಿಪಾಗಿಟ್ಟು ಅದೆಷ್ಟೋ ವಿದ್ಯಾರ್ಥಿಗಳ ಬದುಕು ದಡ ಮುಟ್ಟುವವರೆಗೂ ಕೈ ಹಿಡಿದು ನಡೆಸುತ್ತಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಗುರುಗಳು ಕೇಂದ್ರದ ನಿರ್ವಹಣಾ ಸಮಿತಿಯ ಕೆಲವೊಂದು ವ್ಯವಸ್ಥೆಗೆ ಭಿನ್ನಭಿಪ್ರಾಯ ವ್ಯಕ್ತಪಡಿಸಿ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ.

ಆದ್ದರಿಂದ ಈವರೆಗೆ ನಡೆದಂತೆ ಅವರ ಮುಂದಾಳ್ತನದಲ್ಲಿ ನಡೆಯುತ್ತಿದ್ದ ಕೇಂದ್ರದ ಯಾವ ಚಟುವಟಿಕೆಗಳೂ ಇನ್ನು ಮುಂದೆ ನಡೆಯುವುದಿಲ್ಲ. ಮತ್ತು ವಾರಾಂತ್ಯದಲ್ಲಿ ಅವರ ನೇತೃತ್ವದ ಮೂಲಕ ಆರಂಭವಾಗಿದ್ದ ಉಚಿತ ಯಕ್ಷಗಾನ ತರಗತಿಗಳು ಇನ್ನು ಮುಂದೆ ಸ್ಥಗಿತಗೊಳ್ಳುತ್ತಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

ಯಾರು ಬನ್ನಂಜೆ ಸಂಜೀವ ಸುವರ್ಣ

ಬನ್ನಂಜೆ ಸಂಜೀವ ಸುವರ್ಣರು ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಸವಾಲನ್ನು ಎದುರಿಸುತ್ತಿದ್ದ ಸಾಮುದಾಯಿಕ ಹಿನ್ನೆಲೆಯಲ್ಲಿ ಉಡುಪಿಯ ಬನ್ನಂಜೆ ಎಂಬಲ್ಲಿ ಜನಿಸಿದರು. ಅವರು ಆಕಸ್ಮಿಕವಾಗಿ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಒಂದೂವರೆ ತರಗತಿ ಓದಿ ಶಾಲಾಶಿಕ್ಷಣವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾದ ಸ್ಥಿತಿಯಲ್ಲಿದ್ದ ಸಂಜೀವ ಸುವರ್ಣ, ಗುಂಡಿಬೈಲು ನಾರಾಯಣ ಶೆಟ್ಟರಲ್ಲಿ ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತರೆ, ಮೆಟ್ಕಲ್ ಕೃಷ್ಣಯ್ಯ ಶೆಟ್ಟರು, ಮಾರ್ಗೋಳಿ ಗೋವಿಂದ ಸೇರಗಾರ ಅವರಲ್ಲಿ ಯಕ್ಷಗಾನದ ಅನುಭವವನ್ನು ವಿಸ್ತರಿಸಿಕೊಂಡರು.

ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟಪಾಡಿ ವೀರಭದ್ರ ನಾಯಕರ ಗುರುತ್ವವು ಅವರ ಕಲಾಬದುಕಿನ ಹೊಸ ಬಾಗಿಲನ್ನು ತೆರೆಯಿತು. ಗುರು ನೀಲಾವರ ರಾಮಕೃಷ್ಣಯ್ಯ ಅವರು ಭಾಗವತಿಕೆಯೊಂದಿಗೆ ಯಕ್ಷಗಾನದ ಸಂಸ್ಕಾರವನ್ನು ಉಣ್ಣಿಸಿದರು. ಗುರು ಹಿರಿಯಡಕ ಗೋಪಾಲ್ ರಾವ್, ಬಿರ್ತಿ ಬಾಲಕೃಷ್ಣ ಅವರೊಂದಿಗೆ ಮಾಯಾರಾವ್ ಅವರ ತಂಡದಲ್ಲಿ ಯುರೋಪ್ ಪ್ರವಾಸ ಮಾಡುವುದರೊಂದಿಗೆ ಯಕ್ಷಗಾನ ಸಾಧನೆಯ ಮತ್ತೊಂದು ಮಜಲು ತೆರೆದುಕೊಂಡಿತು. ಕೋಟ ಶಿವರಾಮ ಕಾರಂತರ ಬ್ಯಾಲೆಯಂಥ ಯಕ್ಷಗಾನ ಪ್ರಯೋಗಗಳಲ್ಲಿ ಭಾಗವಹಿಸಿ ಹಲವು ದೇಶಗಳನ್ನು ಸುತ್ತಿದರು.

ಯಕ್ಷಗಾನ ಕಲಾವಿದರಾಗಿ ಸುಮಾರು ಐವತ್ತು ದೇಶಗಳನ್ನು ಮತ್ತು ಭಾರತದಾದ್ಯಂತ ಹಲವು ನಗರಗಳನ್ನು ಸುತ್ತಿರುವ ಸಂಜೀವ ಸುವರ್ಣರು ಸಮಕಾಲೀನ ಪ್ರಯೋಗಗಳ ಅನುಭವಿಯಾದರೂ ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಆಳವಾದ ಅಧ್ಯಯನ ಮಾಡಿ, ಪೂರ್ವರಂಗವನ್ನು ಸಮಗ್ರವಾಗಿ ಪ್ರಸ್ತುತಪಡಿಸಬಲ್ಲ ಸಮರ್ಥರು. ನಾಟ್ಯಾಭಿನಯ, ವೇಷಭೂಷಣ ತಯಾರಿಕೆ, ಹಿಮ್ಮೇಳ, ಚೆಂಡೆ ಮದ್ದಲೆ ತಯಾರಿಕೆ ಹೀಗೆ ಯಕ್ಷಗಾನದ ಸಕಲ ಅಂಗಗಳನ್ನು ಬಲ್ಲವರು.

ಜರ್ಮನಿಯ ಕ್ಯಾಥರೀನ್ ಬೈಂದ‌ರ್ ಅವರು, ಸಂಜೀವ ಸುವರ್ಣರ ಗುರುತ್ವದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಪಿಎಚ್.ಡಿ ಮಾಡಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದು ಸಂಜೀವ ಸುವರ್ಣರ ಹೆಚ್ಚುಗಾರಿಕೆ.

ಪ್ರಸ್ತುತ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ 40 ವರ್ಷಗಳಿಂದ ಪ್ರಾಚಾರ್ಯರಾಗಿರುವ ಸಂಜೀವ ಸುವರ್ಣ ಅವರು ಕಳೆದ ಕೆಲವು ವರ್ಷಗಳಿಂದ ಅನೇಕ ಮಕ್ಕಳಿಗೆ ಉಚಿತ ಶಾಲಾಶಿಕ್ಷಣ ಮತ್ತು ಯಕ್ಷಗಾನ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಕಲೆ ಮಾನವತೆಯನ್ನು ಪ್ರತಿಪಾದಿಸಬೇಕು ಮತ್ತು ಸಮಾಜಮುಖಿಯಾಗಿ ತೆರೆದುಕೊಳ್ಳಬೇಕೆಂಬುದು ಸಂಜೀವ ಸುವರ್ಣರ ತಾತ್ವಿಕ ನಿಲುವು. ಈಗ ಪತ್ನಿ ವೇದಾವತಿ ಮತ್ತು ಇಬ್ಬರು ಮಕ್ಕಳೊಂದಿಗೆ ಉಡುಪಿ-ಬುಡ್ಡಾರಿನ ಗುರುದಕ್ಷಿಣೆ ಎಂಬ ಮನೆಯಲ್ಲಿ ವಾಸಿಸುತ್ತಿದ್ದಾರೆ.