ಡೈಲಿ ವಾರ್ತೆ : 31 ಆಗಸ್ಟ್ 2022


✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ.
([email protected])

“ನಾಡಿನೆಲ್ಲೆಡೆ ವಿಘ್ನವಿನಾಶಕನ ಚತುರ್ಥಿ ಆರಾಧನೆ…..!”ಮೋದಕ ಪ್ರಿಯ ಗಣಪತಿಗೆ ಮಹಾಮಜ್ಜನ…..!ಮೊದಲ ಪೂಜಿತಾ ಆರಾಧಿತನಿಗೆ ಚೌತಿಯ ಸಂಭ್ರಮ….!”

ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ. ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸುವ ಗಣೇಶ ಚತುರ್ಥಿ ,ದೇಶಕ್ಕೆ ಹೆಮ್ಮೆ ಹಾಗೂ ಧಾರ್ಮಿಕ ಭಕ್ತಿ ಗಳಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಳ್ಳುವ ಗಣೇಶ ಚತುರ್ಥಿ ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ವಿಶೇಷ ಪಾತ್ರ ವಹಿಸುತ್ತವೆ.

ಮೋದಕ/ ಪಂಚಕಜ್ಜಾಯ/ ಗರಿಕೆ, ಹೂಗಳಿಂದ ಅಲಂಕೃತಗೊಳಿಸಿ,ವಿವಿಧ ಭಕ್ಷ್ಯ ಭೋಜನಗಳನ್ನು ಬಡಿಸಿ ಗಣಪತಿಗೂ ಇಷ್ಟವಾದಂತಹ ಪರಿಕರಗಳನ್ನ ನೈವೇದ್ಯ ಮಾಡಿಸಿ, ಪ್ರಸಾದ ವಿತರಣೆ ಮಾಡಿ ಜನರನ್ನು ಭಕ್ತಿ ಪ್ರಧಾನವಾದ ಗಣೇಶ ಚತುರ್ಥಿಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವಂತೆ ಗಣಪ ಪ್ರತಿಯೊಬ್ಬರ ಮನೆ ಮತ್ತು ಮನದಲ್ಲಿ ಐಕ್ಯವಾಗುತ್ತಾನೆ ಎನ್ನುವುದು ಜನರ ಅಪಾರ ನಂಬಿಕೆ. ವಿಶಿಷ್ಟವಾದಂತಹ ಗಣೇಶ ಚತುರ್ಥಿ ನಾಡಿನ ಬಹುತೇಕವಾದ ಧಾರ್ಮಿಕ ಪ್ರಧಾನಕ್ಕೆ ಸಾಕ್ಷಿಯಾಗಿದೆ. ಪ್ರಿಯ, ವಿಘ್ನವಿನಾಶಕ, ವಿನಾಯಕ, ಲಂಬೋದರ, ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಗಣೇಶನ ಆರಾಧನೆ ಜಗತ್ಪ್ರಸಿದ್ಧಿ . ಭಾರತದ ಮತ್ತೊಂದು ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯನ್ನು ಆಚರಿಸುವ ಸಂಭ್ರಮದಲ್ಲಿ ನಾವಿದ್ದೇವೆ.

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಹತ್ತು ದಿನಗಳ ಅವಧಿಯ ಹಬ್ಬವು ಪ್ರತಿ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಬರುತ್ತದೆ. ಈ ಹಬ್ಬವು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದ ಭಗವಾನ್ ಗಣೇಶನ ಜನ್ಮವನ್ನು ಸೂಚಿಸುತ್ತದೆ. ಈ ಆಚರಣೆಯು ಆಗಸ್ಟ್ 31 ರಂದು ಪ್ರಾರಂಭವಾಗುತ್ತದೆ ಮತ್ತು ಅನಂತ ಚತುರ್ದಶಿಯಂದು ಮುಕ್ತಾಯಗೊಳ್ಳುತ್ತದೆ. ಗಣೇಶ ವಿಸರ್ಜನೆ ಅಥವಾ ನಿಮಜ್ಜನವು ಹಬ್ಬದ ಕೊನೆಯ ದಿನವಾದ ಸೆಪ್ಟೆಂಬರ್ 9 ರಂದು ನಡೆಯುತ್ತದೆ. ಗಣೇಶ ಚತುರ್ಥಿ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ.

ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ. ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.ಮನೆಗಳಲ್ಲಿ, ದೇವಾಲಯಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು ಪೆಂಡಲ್‌ಗಳಲ್ಲಿ ಇರಿಸಲಾಗುತ್ತದೆ. ಹೆಚ್ಚುವರಿಯಾಗಿ, ಪ್ರತಿಮೆಯನ್ನು ಅಲಂಕರಿಸಲು ಹೂವುಗಳು, ಹೂಮಾಲೆಗಳು ಮತ್ತು ದೀಪಗಳನ್ನು ಬಳಸಲಾಗುತ್ತದೆ. ಒಬ್ಬ ಪುರೋಹಿತನು ದೇವತೆಗೆ ಜೀವ ತುಂಬಲು ಪ್ರಾಣಪ್ರತಿಷ್ಠೆ ಎಂದು ಕರೆಯಲ್ಪಡುವ ಮಂತ್ರಗಳನ್ನು ಪಠಿಸುತ್ತಾನೆ.ಗಣೇಶನ ವಿಗ್ರಹವನ್ನು ಮುಂದೆ 16 ವಿಭಿನ್ನ ರೀತಿಯಲ್ಲಿ ಪವಿತ್ರಗೊಳಿಸಲಾಗುತ್ತದೆ. ಷೋಡಶೋಪಚಾರ ಎಂಬುದು ಈ ಆಚರಣೆಯ ಹೆಸರು.ಧಾರ್ಮಿಕ ಸಂಗೀತವನ್ನು ಹಾಡಲಾಗುತ್ತದೆ ಅಥವಾ ನುಡಿಸಲಾಗುತ್ತದೆ, ಜನರು ಡ್ರಮ್ ಬೀಟ್‌ಗಳಿಗೆ ನೃತ್ಯ ಮಾಡುತ್ತಾರೆ.


“ವಿಘ್ನ ವಿನಾಶಕನ ವಿವಿಧ ರೀತಿಯ ಪರಿಕ್ರಮಗಳು, ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದಂತಹ ದಂತಕಥೆಗಳು ಹೊಂದಿರುತ್ತದೆ ಅದೇ ರೀತಿ ಗಣೇಶ ಚತುರ್ಥಿಯ ದಿನದಂದು ವಿಘ್ನವಿನಾಶಕನಿಗೆ ವಿಶಿಷ್ಟವಾದ ಅಭಿಷೇಕ ಮಾಡುವುದರೊಂದಿಗೆ ಆಚರಣೆ ವಿಶಿಷ್ಟ ಪರಿಕರಗಳು ದೇಶದ ಹಾಗೂ ಜಗದಗಲ ಜನರ ನಂಬಿಕೆ ವಿಶ್ವಾಸಕ್ಕೆ ಪಾತ್ರವಾಗಿದೆ.

ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ.

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು..!

ಚಿತ್ರ ಕೃಪೆ :ರಾಘು ನಾಗೂರ್….!