ಡೈಲಿ ವಾರ್ತೆ : 24 ಸೆಪ್ಟೆಂಬರ್ 2022

ಮಹಾರಾಷ್ಟ್ರ: ಗಡಿಭಾಗದಲ್ಲಿ ಗಾಂಜಾ ಬೆಳೆ ; ದಾಳಿ ನಡೆಸಿದ್ದ ಪೊಲೀಸರ ಮೇಲೆ ಗಾಂಜಾ ದಂಧೆಕೋರರಿಂದಲೇ ಮಾರಣಾಂತಿಕ ಹಲ್ಲೆ !

ಕಲಬುರಗಿ : ಮಹಾರಾಷ್ಟ್ರ ಗಡಿಭಾಗದಲ್ಲಿ ಗಾಂಜಾ ಬೆಳೆಯುತ್ತಿದ್ದ ಜಾಗಕ್ಕೆ ದಾಳಿ ನಡೆಸಿದ್ದ ಪೊಲೀಸರ ಮೇಲೆ ಗಾಂಜಾ ದಂಧೆಕೋರರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.

ಕರ್ನಾಟಕ – ಮಹಾರಾಷ್ಟ್ರ ಗಡಿಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಭೋಸಗಾ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿಗಳು ಗಾಂಜಾ ಬೆಳೆದಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಕಲಬುರಗಿ ಜಿಲ್ಲಾ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿತ್ತು. ಈ ವೇಳೆ, 40ಕ್ಕೂ ಹೆಚ್ಚು ಮಂದಿಯಿದ್ದ ದಂಧೆಕೋರರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಸಿಪಿಐ ಇಲ್ಲಾಳ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಮುಖ, ಹೊಟ್ಟೆಯ ಭಾಗಕ್ಕೆ ಹಲ್ಲೆ ನಡೆಸಿದ್ದು ಇಲ್ಲಾಳ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಪಿಐ ಇಲ್ಲಾಳ ನೇತೃತ್ವದ ಪೊಲೀಸರು ಎರಡು ದಿನಗಳ ಹಿಂದೆ ಪ್ರಮುಖ ಆರೋಪಿ ಸಂತೋಷ ಸೇರಿದಂತೆ ಅನೇಕ ಗಾಂಜಾ ದಂಧೆಕೋರರನ್ನೂ ಬಂಧಿಸಿದ್ದರು. 10 ಜನರ ಪೊಲೀಸ್ ತಂಡ ಶುಕ್ರವಾರ ಮಹಾರಾಷ್ಟ್ರ ಗಡಿಭಾಗಕ್ಕೆ ಹೋಗಿದ್ದು ಅಲ್ಲಿ ಗಾಂಜಾ ಬೆಳೆಯುತ್ತಿದ್ದ ಹೊಲಗಳಿಗೆ ದಾಳಿ ನಡೆಸಿತ್ತು. ರಾತ್ರಿ 9:30ರ ವೇಳೆಗೆ 40 ಮಂದಿಯಿದ್ದ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಗಾಂಜಾ ದಂಧೆಕೋರರು ಪೊಲೀಸರನ್ನು ಅಟ್ಟಾಡಿಸಿದ್ದಾರೆ. ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನ ಮಧ್ಯರಾತ್ರಿ 2:30ರ ವೇಳೆಗೆ ಸಮೀಪದ ಆಸ್ಪತ್ರೆಗೆ ಒಯ್ಯಲಾಗಿತ್ತು.