ಡೈಲಿ ವಾರ್ತೆ: 03/ಮೇ /2024

ಬಿಸಿಲಿನ ಹೊಡೆತದ ನಡುವೆ ಕರಾವಳಿಯಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ: ಡೆಂಗ್ಯೂ, ಬಿಸಿಲು ಮುಂಜಾಗ್ರತ ಕ್ರಮವೇನು?

ಉಡುಪಿ: ಅತಿಯಾದ ಉಷ್ಣತೆ ಮತ್ತು ಬಿಸಿಗಾಳಿಗೆ ಸಾರ್ವಜನಿಕರು ಹೆದರಿ ಹೋಗಿದ್ದಾರೆ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲದ ಸ್ಥಿತಿ  ಉಂಟಾಗಿದೆ . ಅತಿಯಾದ ನಿರ್ಜಲೀಕರಣ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಬಿಸಿಲಿನ ಧಗೆಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಸಲಹೆ ಸೂಚನೆಗಳನ್ನು ನೀಡಿದೆ.
ಆಗಾಗ ನೀರು ಕುಡಿಯುತ್ತಿರಬೇಕು, ಪುನರ್ಜಲೀಕರಣ ದ್ರಾವಣ ಬಳಸಬೇಕು, ಎಳನೀರು ಅಥವಾ ಮನೆಯಲ್ಲಿ ಸಿದ್ಧಪಡಿಸಿದ ನಿಂಬೆ ಶರಬತ್ತು, ಹಣ್ಣಿನ ರಸ, ಮಜ್ಜಿಗೆ ಲಸ್ಸಿ ಸೇವಿಸುವ ಮೂಲಕ ದೇಹ ನಿರ್ಜಲೀಕರಣಗೊಳ್ಳದಂತೆ ರಕ್ಷಣೆ ಮಾಡಿಕೊಳ್ಳಬಹುದು.

ಹೆಚ್ಚು ನೀರಿನ ಅಂಶ ಹೊಂದಿರುವ ಕಲ್ಲಂಗಡಿ, ಕರ್ಬೂಜದಂಥ ಹಣ್ಣು ಸೇವನೆ ಸೂಕ್ತ ಎಂದು ತಿಳಿಸಿದೆ.
ಬಿಸಿಲಿನಿಂದ ರಕ್ಷಣೆ ಪಡೆಯಲು ತಿಳಿಬಣ್ಣದ ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು, ಗಾಳಿಯಾಡುವ ಪಾದರಕ್ಷೆ ಧರಿಸುವುದು ಉತ್ತಮ.
ಬಿಸಿಲಿನಲ್ಲಿ ಹೊರಹೋಗುವಾಗ ಛತ್ರಿ, ಟೋಪಿ, ಟವೆಲ್, ತಂಪು ಕನ್ನಡಕ ಬಳಸುವುದು ಉಪಯುಕ್ತ. ಬೆಳಿಗ್ಗೆ 11 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ.
ಮಧ್ಯಾಹ್ನ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕು.
ಸಾಧ್ಯವಾದಷ್ಟು ಗಾಳಿ ಬೀಸುವ, ತಣ್ಣಗಿರುವ ಹಾಗೂ ನೆರಳಿನ ಪ್ರದೇಶದಲ್ಲಿ ಇರಬೇಕು ಎಂದು ಸಲಹೆ ನೀಡಿದೆ.

ನವಜಾತ ಶಿಶುಗಳು ಮತ್ತು ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು, ಹೃದ್ರೋಗ ಹಾಗೂ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆ ಇರುವವರು ಮತ್ತು ಹೊರಗೆ ಕೆಲಸ ಮಾಡುವವರಿಗೆ ಅತಿಯಾದ ಉಷ್ಣತೆ ಹೆಚ್ಚು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು.
ಚಿಕ್ಕಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವುದು ಸೂಕ್ತವಲ್ಲ. ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಒಳಗೆ ಬಿಡಬಾರದು.
ಮದ್ಯ, ಕಾಫಿ, ಟೀ, ಕಾರ್ಬೋನೇಟೆಡ್ ಪಾನೀಯಗಳಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ತಿಳಿಸಿದೆ.
ಬಾಯಿ ಒಣಗುವುದು, ವಿಪರೀತ ಸುಸ್ತು, ತಲೆಸುತ್ತು, ಪ್ರಜ್ಞೆ ತಪ್ಪುವುದು, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತ ಹೆಚ್ಚುವಿಕೆ, ವಾಕರಿಕೆ ಅಥವಾ ವಾಂತಿಯಾಗುವ ಲಕ್ಷಣಗಳಿದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.
ತುರ್ತು ಸಂದರ್ಭ ಇದ್ದರೆ 108ಕ್ಕೆ ಕರೆ ಮಾಡಿ ಸೇವೆ ಪಡೆದುಕೊಳ್ಳಬಹುದು. ಅಗತ್ಯ ಮಾಹಿತಿಗಳಿಗೆ 102 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಹೈರಾಣಾಗಿಸಿದ ಡೆಂಗ್ಯೂ!
ಬಿಸಿಲಿನ ಬೇಗೆ ಒಂದೆಡೆಯಾದರೆ ಡೆಂಗಿ ಕಿರಿಕಿರಿ ಕೂಡ ಜನರನ್ನು ಹೈರಾಣಾಗಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಬೇಕು. ಡೆಂಗಿಯಿಂದ ದೂರವಿರಲು ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಶೇಖರಿಸಿಡುವ ತೊಟ್ಟಿ, ಡ್ರಂ, ಬ್ಯಾರಲ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿ ಮುಚ್ಚಿಡಬೇಕು. ಟೈರ್‌, ಟ್ಯೂಬ್, ತೆಂಗು ಮತ್ತು ಎಳನೀರಿನ ಚಿಪ್ಪು, ಅನುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಲಾಗಿದೆ.
ಫ್ರಿಜ್, ಕೂಲರ್, ಹೂವಿನ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷಣಾ ವಿಧಾನ ಅನುಸರಿಸುವ ಮೂಲಕ ಸಾರ್ವಜನಿಕರು ಡೆಂಗಿ ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ. ಧಗೆಯಿಂದ ರಕ್ಷಣೆ, ಆರೋಗ್ಯ ಕಾಪಾಡಿಕೊಳ್ಳಲು ಜಿಲ್ಲಾಡಳಿತ ಸಲಹೆ ತುರ್ತು ಸಂದರ್ಭ ಇದ್ದರೆ 108ಕ್ಕೆ ಕರೆ ಮಾಡಲು ಸಲಹೆ ಅಗತ್ಯ ಮಾಹಿತಿಗೆ 102 ಸಹಾಯವಾಣಿ ಸಂಪರ್ಕಿಸಲು ಸೂಚನೆ.