ಡೈಲಿ ವಾರ್ತೆ : 28 ಸೆಪ್ಟೆಂಬರ್ 2022

ವರದಿ:ಶಿವಾನಂದ ಆರ್.ಬಿದರಕುಂದಿ.

ಮಾರಕಾಸ್ತ್ರಗಳನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಣೆ: ಪೊಲೀಸರ ಮೇಲೆ ಹಲ್ಲೆ ನಡೆಸಿದವನಿಗೆ 5 ವರ್ಷ ಕಠಿಣಶಿಕ್ಷೆ

ಕಲಬುರಗಿ.(ಸೆ.28) ಮಾರಕಾಸ್ತ್ರಗಳನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸರ ಮೇಲೆ ಆಯುಧದಿಂದ ಹಲ್ಲೆ ನಡೆಸಿದ ಆರೋಪ ಸಾಬೀತಾದ್ದರಿಂದ ತಾಜಸುಲ್ತಾನಪುರ ನಿವಾಸಿ ಯಶವಂತ ಬೆಟ ಜೇವರಗಿ ಅಲಿಯಾಸ್ ಮೇಲಿನಕೇರಿ ಎಂಬಾತನಿಗೆ ನಗರದ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿದೆ.

ಘಟನೆಯ ವಿವರ:
2017ರ ಡಿಸೆಂಬರ್ 20 ರಂದು ನಸುಕಿನಲ್ಲಿ ಹುಮನಾಬಾದ್ ಕಡೆಯಿಂದ ಕಾರಿನಲ್ಲಿ ಅಕ್ರಮ ಮಾರಕಾಸ್ತ್ರ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಪಿಐ ವಾಜೀದ್ ಪಟೇಲ್ ಮತ್ತು ಸಿಬ್ಬಂದಿಯವರು ಹುಮನಾಬಾದ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸುತ್ತಾರೆ.ಆಗ ಯಶವಂತ ಬೆಟ ಜೇವರಗಿಯು ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ತಾವರಗೇರ ಕ್ರಾಸ್ ಕಡೆಗೆ ಕಾರಿನಲ್ಲಿ ಪಲಾಯನ ಮಾಡುತ್ತಾನೆ.ಹಿಂಬಾಲಿಸಿದ ಪೊಲೀಸರು ಸರ್ವಿಸ್ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡುತ್ತಾರೆ.ಆತ ಹಾಗೆಯೇ ಹೋಗುತ್ತಿದ್ದಾಗ ಕಾರ್ ಟೈರ್ ಗೆ ಗುಂಡು ಹಾರಿಸುತ್ತಾರೆ.ಯಶವಂತನು ಕಾರಿನಿಂದ ಇಳಿದು ಪೊಲೀಸ್ ಸಿಬ್ಬಂದಿ ಕುಶಣ್ಣ ಎಂಬುವವರಿಗೆ ಆಯುಧದಿಂದ ಹಲ್ಲೆ ಮಾಡುತ್ತಾನೆ. ನಂತರ ಈತನ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದಾಗ ಸಿಕ್ಕಿ ಬೀಳುತ್ತಾನೆ.
ಈ ಬಗ್ಗೆ ಗ್ರಾಮೀಣ ವೃತ್ತದ ಸಿಪಿಐ ಶಾಂತಿನಾಥ ಬಿಪಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚಂದ್ರಶೇಖರ ಖರೋಷಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.ಸರಕಾರದ ಪರವಾಗಿ ಮೂರನೇ ಹೆಚ್ಚುವರಿ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.
ಅಪರಾಧಿ ಯಶವಂತ ಈಗ ವಿಜಯಪುರ ಜಿಲ್ಲೆ ಆಲಮೇಲ ಠಾಣೆ ವ್ಯಾಪ್ತಿಯ ಕೊಲೆಯ ಪ್ರಕರಣದಲ್ಲಿ ವಿಜಯಪುರ ಜೈಲಿನಲ್ಲಿ ವಿಚಾರಣಾಬಂಧಿಯಾಗಿದ್ದಾನೆ