ಡೈಲಿ ವಾರ್ತೆ: 04 ನವಂಬರ್ 2022

ಕಟೀಲು ಮೇಳದಲ್ಲಿ ಕಾಲಮಿತಿಗೆ ಭಕ್ತರ ಅಸಮಾಧಾನ: 6ರಂದು ‘ಕಟೀಲಮ್ಮನೆಡೆಗೆ ಭಕ್ತರ ನಡೆ’ ಪಾದಯಾತ್ರೆ



ಯಕ್ಷಗಾನದ ಪಾರಂಪರಿಕ ಮೇಳವೆಂದೇ ಖ್ಯಾತವಾಗಿರುವ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಕ್ತಾದಿಗಳ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಬೇಕೆಂದು ಆಗ್ರಹಿಸಿ ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿಯ ಸದಸ್ಯರು ನ.6ರಂದು ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ `ಕಟೀಲಮ್ಮನೆಡೆಗೆ ಭಕ್ತರ ನಡೆ’ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಿದ್ದಾರೆ.

ದೇವಸ್ಥಾನದ ಮೇಳದವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ರಾತ್ರಿ ಯಕ್ಷಗಾನ ಸೇವೆಯಾಟಗಳನ್ನು ಏಕಪಕ್ಷೀಯವಾಗಿ ದಿಢೀರಾಗಿ ಸಂಜೆ 4.30ರಿಂದ ರಾತ್ರಿ 10ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ಮುಂದೆ ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದೇವಳದ ಆತುರದ ನಿರ್ಧಾರ ಭಕ್ತಾದಿಗಳ ಮನಸ್ಸಿಗೆ ಆಘಾತ ಮಾಡಿದೆ ಎಂದು ತಿಳಿಸಿದ್ದಾರೆ.

ಭಕ್ತಾದಿಗಳು ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿ ತ್ವರಿತ ಪರಿಹಾರವಾದಲ್ಲಿ ತಮ್ಮ ಕ್ಷೇತ್ರದಲ್ಲಿ ಬಯಲಾಟ ಆಡಿಸುವುದಾಗಿ ಹರಕೆ ಹೊತ್ತು ಊರಿನ ಹತ್ತು ಸಮಸ್ಥರು ಗ್ರಾಮದಲ್ಲಿ ದುಷ್ಟಾರಿಷ್ಟಗಳು ಕಳೆದು ಗ್ರಾಮ, ರಾಷ್ಟ್ರಕ್ಕೆ ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸಿ ಭಕ್ತಿ ಪುರಸ್ಸರವಾಗಿ ಶ್ರದ್ಧಾ ಭಕ್ತಿ ನಂಬಿಕೆ ಭಾವಪರವಶತೆಯಿಂದ ಪರಂಪರಾಗತವಾಗಿ ತುಳುನಾಡಿನ ಮಣ್ಣಿನ ಪ್ರತೀತಿಯಂತೆ ಸಮರ್ಪಿಸುವ ಸೇವೆ ಯಕ್ಷಗಾನ, ಕಟೀಲು ತಾಯಿ ರಾತ್ರಿಯ ಪೂಜೆಯ ನಂತರ ಕಟೀಲು ಮೇಳದ ಯಕ್ಷಗಾನ ವೀಕ್ಷಿಸಲು ತೆರಳುತ್ತಾಳೆ ಎಂಬುದು ಸಾರ್ವತ್ರಿಕ ನಂಬಿಕೆ.

ಅಷ್ಟಮಂಗಲ ಪ್ರಶ್ನೆಯಲ್ಲೂ ಇದು ಶ್ರುತಗೊಂಡು ಕಟೀಲಿನ ಅಸ್ರಣ್ಣರು ಈ ಸತ್ಯವನ್ನು ತಾವು ಮಾಡುವ ಪ್ರಾರ್ಥನೆಯಲ್ಲೂ ಉಲ್ಲೇಖಿಸುವುದು ದಿಟ. ಕಟೀಲು ಮೇಳಕ್ಕೆ ಹರಕೆಯ ಯಕ್ಷಗಾನ ಬಯಲಾಟಗಳು ಹರಿದು ಬರುವಷ್ಟು ಇತರ ಯಾವುದೇ ಮೇಳಗಳಿಗೂ ಬರುವುದಿಲ್ಲ. ಆದುದರಿಂದಲೇ 80ರ ದಶಕದಲ್ಲಿ ಒಂದಿಂದ್ದ ಕಟೀಲು ಮೇಳ ಭಕ್ತಾದಿಗಳ ಅವಶ್ಯಕತೆ ಪೂರೈಸಲು ಇಂದು 6 ಮೇಳಗಳಾಗಿ ನಾಡಿನ ಉದ್ದಗಲಕ್ಕೂ ಸಂಚರರಿಸುತ್ತಿದೆ.

ಕಾಲಮಿತಿ ಯಕ್ಷಗಾನ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ. ಮಾತ್ರವಲ್ಲ ಪರಂಪರೆಗೆ ಧಕ್ಕೆ ತಂದಿದೆ. ಕಾಲಮಿತಿ ಆಟವಾದರೆ ಈ ಬಾರಿಯಿಂದಲೇ ಸೇವಾ ಬಯಲಾಟವನ್ನು ನಿಲ್ಲಿಸೋಣ ಎಂಬ ಪತ್ರಗಳನ್ನು ಈಗಾಗಲೇ ಸಂಬಂಧಿತರಿಗೆ ತಲುಪಿಸಿರುವ ಬಗ್ಗೆ ಮಾಹಿತಿ ಇದೆ. ಮತ್ತಷ್ಟು ಹತ್ತು ಸಮಸ್ತರು ವರ್ಷಂಪ್ರತಿ ನಡೆಸಲಿರುವ ಸೇವೆಯನ್ನು ಬೇರೆ ಮೇಳಗಳಿಂದ ಮಾಡಿಸುವ ಯಾ ಶ್ರೀದೇವಿಗೆ ಕಾಣಿಕೆ ಹಾಕಿ ಪ್ರಾರ್ಥಿಸುವ ಯಾ ಇನ್ನಿತರ ವಿಧಗಳಲ್ಲಿ ಹರಕೆ ತೀರಿಸಲು ನಿರ್ಧರಿಸಿರುವುದು ಗಮನಕ್ಕೆ ಬಂದಿದೆ.
ಅರ್ಧಂಬರ್ಧ ಸೇವೆ ಮಾಡುವುದಕ್ಕಿಂತ ಸೇವೆಯನ್ನು ನಿಲ್ಲಿಸೋಣ ಎಂದು ಹೇಳುತ್ತಿರುವುದು ನೊಂದ ಭಕ್ತರ ಮನದಾಳದ ನೋವನ್ನು ವ್ಯಕ್ತಪಡಿಸುತ್ತದೆ. ಯಾವುದೇ ಕಾರಣಕ್ಕೂ ಯಕ್ಷಗಾನ ಸೇವೆಯನ್ನು ಮೊಟಕುಗೊಳಿಸಿ ಶ್ರೀದೇವಿಗೆ ಅರ್ಪಿಸುವ ಸೇವೆಯಲ್ಲಿ ನ್ಯೂನತೆ ಅಪಚಾರ ಸಲ್ಲದು ಎಂದು ಸೇವಾದಾರರು ವಾದಿಸುತ್ತಿದ್ದಾರೆ.

ಕೆಲವೊಂದು ಕಡೆಗಳಲ್ಲಿ ಅರ್ಧ ಆಟಕ್ಕೆ ಅರ್ಧ ವೀಳ್ಯ ನಿಗದಿಪಡಿಸಲಿ, ಮಾಡದ ಕೆಲಸಕ್ಕೆ ಪಾವತಿ ಏಕೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಜಿಲ್ಲೆ, ರಾಜ್ಯ, ಹೊರರಾಜ್ಯಗಳಲ್ಲೂ ಭಕ್ತಾದಿಗಳು ತಮ್ಮ ಭಾವನೆಗಳನ್ನು ತುಂಬಾ ನೋವಿನಿಂದ ಪ್ರಕಟಪಡಿಸುತ್ತಿದ್ದಾರೆ ಎಂದರೆ ಈ ನಿರ್ಧಾರ ಅದೆಷ್ಟು ಜನರ ಶ್ರದ್ಧಾಭಕ್ತಿಯನ್ನು ಘಾಸಿಗೊಳಿಸಿದೆ ಎಂಬುವುದನ್ನು ಪರಾಂಬರಿಸಬಹುದು.

ಕಟೀಲು ಮೇಳದವರ ಈ ಆಘಾತಕಾರಿ ನಿರ್ಧಾರದಿಂದ ನೊಂದ ಸಹಸ್ರಾರು ಭಕ್ತಾದಿಗಳು ನಮ್ಮ ಸಮಿತಿಯ ನೇತೃತ್ವದಲ್ಲಿ, ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಲೇಬೇಕು ಎಂದು ಆಗ್ರಹಿಸಿ ದಿನಾಂಕ 06.11.2022ರಂದು ಬೆಳಿಗ್ಗೆ 8.30 ರಿಂದ ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆಯನ್ನು ನಡೆಸಲಿದ್ದೇವೆ. ಹಾಗೂ ಶ್ರೀದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವವರಿದ್ದೇವೆ. ಕಾರ್ಯಕ್ರಮದಲ್ಲಿ 8000 ಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಸಮನ್ವಯ ಸಮಿತಿ ಸಂಚಾಲಕ ಅಶೋಕ ಕೃಷ್ಣಾಪುರ ತಿಳಿಸಿದ್ದಾರೆ .