ಡೈಲಿ ವಾರ್ತೆ: 29 ನವಂಬರ್ 2022

ಸಾಲಿಗ್ರಾಮ ಹೆದ್ದಾರಿಯ ಅಸಮರ್ಪಕ ಬೀದಿ ದೀಪ ನಿರ್ವಹಣೆ ವಿರುದ್ಧ ದೊಂದಿ ಬೆಳಕು ಅಳವಡಿಸುವ ಮೂಲಕ ವಿಭಿನ್ನ ಪ್ರತಿಭಟನೆ!

ಕೋಟ : ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಆಶ್ರಯದಲ್ಲಿ ಸಾಲಿಗ್ರಾಮದಲ್ಲಿ ನ. 28 ರಂದು ರಾತ್ರಿ ಪ್ರತಿಭಟನೆ ನಡೆಯಿತು.

ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮ್‌ಸುಂದರ್ ನಾರಿ ಮಾತನಾಡಿ, ಹೆದ್ದಾರಿಯಲ್ಲಿ ಬೀದಿ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ, ಹೈಮಾಸ್ಟ್ ದೀಪಗಳು ನಿರ್ವಹಣೆ ಇಲ್ಲದೆ ಹಲವು ತಿಂಗಳು ಕಳೆದಿದೆ. ಈ ಬಗ್ಗೆ ಎಷ್ಟೇ ದೂರು ನೀಡಿದರು ಪ್ರತಿಕ್ರೀಯೆ ನೀಡುತ್ತಿಲ್ಲ. ಇಂದು ಸಾಂಕೇತಿಕವಾಗಿ ಪ್ರತಿಭಟಿಸಿದ್ದು, ಮುಂದೆ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸುವುದಾಗಿ ತಿಳಿಸಿದರು.



ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಸಾಸ್ತಾನ ಪ್ರತಾಪ್ ಶೆಟ್ಟಿ ಮುಂತಾದವರು ನವಯುಗ ಕಂಪನಿಯ ಜಾಣ ಕುರುಡುತನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಹೈಮಾಸ್ಟ್ ಮಾದರಿಯ ಪಂಜಿನ ಬೆಳಕು ಬೆಳಗುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಜಾಗೃತಿ ಸಮಿತಿ ಪ್ರಮುಖರಾದ ಸಾಲಿಗ್ರಾಮ ನಾಗರಾಜ್ ಗಾಣಿಗ, ಕಾರ್ಕಡ ಅಚ್ಚುತ್ ಪೂಜಾರಿ, ಸಂದೀಪ್ ಕುಂದರ್ ಕೋಡಿ, ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ರಮೇಶ್ ಮೆಂಡನ್, ಸುರೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.