ಡೈಲಿ ವಾರ್ತೆ: 29 ನವಂಬರ್ 2022

ಕೋಟೇಶ್ವರ: ಪ್ರಸಿದ್ಧ ಪುಣ್ಯಕ್ಷೇತ್ರ  ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆದ ಚಂಪಾಷಷ್ಠಿ

ಕೋಟೇಶ್ವರ : ಪ್ರಸಿದ್ಧ ಪುಣ್ಯಕ್ಷೇತ್ರ ಕೋಟೇಶ್ವರ ಸಮೀಪದ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಕ್ಷೇತ್ರದಲ್ಲಿ ಮಂಗಳವಾರ ಚಂಪಾಷಷ್ಠಿ ವಿಜೃಂಭಣೆಯಿಂದ ನಡೆಯಿತು. ಇದನ್ನು ಹಿರಿ ಷಷ್ಠಿ ಎಂದೂ ಕರೆಯಲಾಗುತ್ತದೆ.

ಬೆಳಿಗ್ಗೆ 4 ಗಂಟೆಯಿಂದಲೇ ದೂರದೂರದ ಪ್ರದೇಶಗಳಿಂದ ಭಕ್ತ ಜನರು ಕ್ಷೇತ್ರಕ್ಕೆ ಬರತೊಡಗಿದರು. ಸರತಿಯ ಸಾಲಿನಲ್ಲಿ ನಿಂತು, ಶ್ರೀ ಕಾಳಿಂಗ ದೇವರಿಗೆ ಹಣ್ಣು ಕಾಯಿ, ಹೂವು ಕಾಯಿ, ಇತರ ಸೇವೆಗಳನ್ನು ಸಲ್ಲಿಸಿದರು.



ನಾಗ ದೇವರಿಗೆ ಸಿಂಗಾರ ಹೂವು ಬಹು ಪ್ರಿಯ. ಆದ್ದರಿಂದಲೇ ಇಲ್ಲಿ ಹೂವು ಕಾಯಿ ಸಮರ್ಪಣೆ ಎಂಬ ಸೇವೆಯೇ ಇದೆ. ಕ್ಷೇತ್ರಕ್ಕೆ ಆಗಮಿಸುವ ಬಹುಸಂಖ್ಯೆಯ ಭಕ್ತರು ದೇವರಿಗೆ ಹೂವು ಕಾಯಿ ಸಮರ್ಪಿಸುತ್ತಾರೆ.

ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜೆಗಳು, ಅಭಿಷೇಕ, ಮಧ್ಯಾನ್ಹ ದೇವರ ಸಂದರ್ಶನ, ಪಲ್ಲಪೂಜೆ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಸಲಾಯಿತು. ಮಧ್ಯಾನ್ಹದ ಅನ್ನ ಸಂತರ್ಪಣೆಯಲ್ಲಿ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಮಂದಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ಚಂಪಾಷಷ್ಠಿ ಅಥವಾ ಹಿರಿಷಷ್ಠಿಯ ಮಂಗಳವಾರ ನಸುಕಿನಿಂದಲೇ ಕುಂದಾಪುರ ಪೊಲೀಸರು ಪರಿಣಾಮಕಾರಿಯಾದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ ಹೆಗ್ಡೆ ನೇತೃತ್ವದ ಸಮಿತಿಯವರು   ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಿದ್ದರಿಂದ ಸಾವಿರಾರು ಮಂದಿ ಆಗಮಿಸಿದ್ದರೂ ಎಲ್ಲಿಯೂ ನೂಕುನುಗ್ಗಲು, ಅವ್ಯವಸ್ಥೆ ಉಂಟಾಗಲಿಲ್ಲ. ಹಾಲಾಡಿ ರಸ್ತೆಯ ಕಾಳಾವರ ಕ್ರಾಸ್ ನಿಂದಲೇ ಜನರು ವಾಹನಗಳನ್ನು ಪಾರ್ಕ್ ಮಾಡಿ ಕಾಲ್ನಡಿಗೆಯಲ್ಲೇ ಸಾಗಬೇಕಾಗಿತ್ತು. ದಾರಿಯುದ್ದಕ್ಕೂ ವೈವಿಧ್ಯಮಯ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಭರಪೂರ ವಹಿವಾಟು ನಡೆಸಿದವು. ಮೋಡದ ವಾತಾವರ್ಣವಿದ್ದು ಹಬ್ಬದಲ್ಲಿ ಅಡ್ಡಾಡುವವರಿಗೆ ಅನುಕೂಲವಾಯಿತು.

ನ.30ರ ಬುಧವಾರ ಮುಂಜಾನೆ ಹಾಲಿಟ್ಟು ಸೇವೆ, ನಾಗಮಂಡಲೋತ್ಸವ ಕಟ್ಟುಕಟ್ಟಳೆ ಸೇವೆ ನಡೆಯಲಿದೆ. ರಾತ್ರಿ ಯಕ್ಷಗಾನ ನಡೆಯಲಿದೆ.