ಡೈಲಿ ವಾರ್ತೆ: 04/ಮೇ /2024

ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಕೊರತೆಯಿಂದ ಆಟೋ ಚಾಲಕರು ಕಂಗಾಲು – ಸಮಸ್ಯೆ ಶೀಘ್ರ ಪರಿಹರಿಸಲು ಡಿಸಿಗೆ ಮನವಿ

ಉಡುಪಿ: ಜಿಲ್ಲೆಯಲ್ಲಿ ಸಿಎನ್‌ಜಿ ಕೊರತೆಯಿಂದ ಆಟೋ ಚಾಲಕರು ಎದುರಿಸುತ್ತಿರುವ  ಸಮಸ್ಯೆಯನ್ನು ಶೀಘ್ರ ಪರಿಹರಿಸಿ, ಅಗತ್ಯ ಪ್ರಮಾಣದಲ್ಲಿ ಸಿಎನ್‌ಜಿ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರಿಗೆ ಆಟೋ ಯೂನಿಯನ್‌ಗಳಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಹಾಗೂ ಯಶೋದಾ ಆಟೋ ಯೂನಿಯನ್‌ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಸಿಎನ್‌ಜಿ ಆಟೋ ರಿಕ್ಷಾ ಇದ್ದು ಉಡುಪಿ ತಾಲೂಕಿನಲ್ಲಿ 1500ಕ್ಕೂ ಅಧಿಕ ಸಿಎನ್‌ಜಿ ಆಟೋ ರಿಕ್ಷಾ ಸಂಚರಿಸುತ್ತಿದೆ. ತಾಲೂಕಿನ ಗುಂಡಿಬೈಲ್, ಮಲ್ಪೆ ಹಾಗೂ ಬ್ರಹ್ಮಾವರದಲ್ಲಿ ಸಿಎನ್‌ಜಿ ಬಂಕ್ ಇದೆ. ರಿಕ್ಷಾ ಚಾಲಕರಿಗೆ ಬೇಡಿಕೆಗೆ ತಕ್ಕಂತೆ ಗ್ಯಾಸ್ ಇಂಧನ ಸಿಗುತ್ತಿಲ್ಲ. ತಾಲೂಕಿನ 3 ಸಿಎನ್‌ಜಿ ಬಂಕ್‌ಗಳಲ್ಲಿ 1ಕ್ಕೆ ಮಾತ್ರ ಸರಬರಾಜು ಆಗಿರುತ್ತದೆ. ಇದರಿಂದ ರಿಕ್ಷಾ ಚಾಲಕರಿಗೆ ತುಂಬಾ ತೊಂದರೆ ಆಗಿರುತ್ತದೆ ಎಂಬ ಅಂಶವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ರಿಕ್ಷಾ ಚಾಲಕರು ಗ್ಯಾಸ್ ತುಂಬಿಸಲು ರಾತ್ರಿ ಹಗಲು ಎನ್ನದೆ ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಮನವಿಯಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉದಯ ಕುಮಾ‌ರ್ ಶೆಟ್ಟಿ ಮುನಿಯಾಲು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯಶೋದಾ ಆಟೋ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.