ಡೈಲಿ ವಾರ್ತೆ: 02 ಡಿಸೆಂಬರ್ 2022

ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರ ಎಡವಟ್ಟು: 5 ಲಕ್ಷ ಪರಿಹಾರ ಆದೇಶಿಸಿದ ಪೋಕ್ಸೋ ನ್ಯಾಯಾಲಯ

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಬಂಧಿಸದೆ ಅದೇ ಹೆಸರಿನ ಬೇರೆ ವ್ಯಕ್ತಿಯನ್ನು ಬಂಧಿಸಿ ಸುಮಾರು ಒಂದು ವರ್ಷ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಮಾಡಿದ ಮಹಿಳಾ ಪೊಲೀಸ್‌ ಅಧಿಕಾರಿಗಳಿಬ್ಬರು 5 ಲಕ್ಷ. ರೂ ಪರಿಹಾರ ನೀಡಬೇಕು ಎಂದು ಇಲ್ಲಿನ ಎರಡನೇ ಹೆಚ್ಚುವರಿ ಎಫ್‌ ಟಿಎಸ್‌ ಸಿ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ.


ಮಂಗಳೂರು ಮಹಿಳಾ ಪೊಲೀಸ್‌ ಠಾಣಾ ನಿರೀಕ್ಷಕರಾದ ರೇವತಿ ಮತ್ತು ಉಪನಿರೀಕ್ಷಕರಾದ ರೋಸಮ್ಮ ಪಿ. ಪಿ. ಅವರು ನವೀನ್‌ ಸಿಕ್ವೇರ ಅವರಿಗೆ 5,00,000 ರೂ. ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಇಬ್ಬರು ಪೊಲೀಸ್‌ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಆದೇಶಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನವೀನ್‌ ಎಂಬಾತ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದನು. ಬಾಲಕಿ ನೀಡಿದ ಹೇಳಿಕೆಯನ್ನಾಧರಿಸಿ ಎಸ್‌.ಐ ರೋಸಮ್ಮ ಪಿ.ಪಿ ಅವರು ನವೀನ್‌ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸ್‌ ನಿರೀಕ್ಷಕಿ ರೇವತಿಯವರಿಗೆ ಹಸ್ತಾಂತರಿಸಿದ್ದರು. ಆದರೆ ತನಿಖಾ ವೇಳೆ ನವೀನ್‌ ಸಿಕ್ವೇರ ಎಂಬವರನ್ನು ಬಂಧಿಸಲಾಗಿತ್ತು. ನೊಂದ ಬಾಲಕಿ ತನ್ನ ದೂರಿನಲ್ಲಿ ಮತ್ತು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ, ಕೇವಲ ನವೀನ್‌ ಎಂಬ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಳು. ಆದರೆ ನವೀನ್‌ ಸಿಕ್ವೇರ ಎಂಬಾತನನ್ನು ಆರೋಪಿಯನ್ನಾಗಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.


ಆರೋಪಿ ಪರ ವಕೀಲರಾದ ರಾಜೇಶ್‌ ಕುಮಾರ್‌ ಅಮ್ಟಾಡಿ ಮತ್ತು ಗಿರೀಶ್‌ ಶೆಟ್ಟಿ ಅವರು ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಯು. ರಾಧಾಕೃಷ್ಣ ಅವರು, ನವೀನ್‌ ಸಿಕ್ವೇರ ನಿರಪರಾಧಿ ಎಂದು ಖುಲಾಸೆ ಗೊಳಿಸಿದ್ದಾರೆ. ಅಲ್ಲದೆ ಪೊಲೀಸ್‌ ಅಧಿಕಾರಿಗಳು ನಿಜವಾದ ವ್ಯಕ್ತಿಯನ್ನು ಬಂಧಿಸದೆ, ನವೀನ್‌ ಸಿಕ್ವೇರ ಅವರನ್ನು ಬಂಧಿಸಿ ಬಾಲಕಿಯ ಮುಂದೆ ಹಾಜರುಪಡಿಸಿ ಗುರುತು ಕೂಡ ಪಡೆದುಕೊಳ್ಳದೆ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ.