ಡೈಲಿ ವಾರ್ತೆ: 01/ಮೇ /2024
ಹೃದಯಾಘಾತ ಏಕೆ ಸಂಭವಿಸುತ್ತದೆ? ಮುನ್ಸೂಚನೆಗಳೇನು-ಇಲ್ಲಿದೆ ಮಾಹಿತಿ
ಇಂದಿನ ಪರಿಸ್ಥಿತಿಯಲ್ಲಿ ಹೃದಯಾಘಾತಕ್ಕೂ ವಯಸ್ಸಿಗೂ ಈಗ ಸಂಬಂಧವೇ ಇಲ್ಲ ಎನಿಸುತ್ತಿದೆ. ಈ ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿತ್ತು.
ಆದರೆ ಈಗ ಹಸುಳೆಯಿಂದ ಹಿಡಿದು ವಯೋವೃದ್ಧರವರೆಗೆ ಯಾವುದೇ ವಯಸ್ಸಿನವರು ಹೃದಯಾಘಾತದ ಅಪಾಯವನ್ನು ಎದುರಿಸುತ್ತಿರುವುದು ಆತಂಕ ಮೂಡಿಸುವುದು.
ಹೃದಯಾಘಾತ ಏಕೆ ಸಂಭವಿಸುತ್ತದೆ? ಮುನ್ಸೂಚನೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಹೃದಯಾಘಾತವಾಗಲು ಕಾರಣ :
ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಆಗುವ ಅಡಚಣೆ. ದೇಹದಲ್ಲಿ ಸಂಗ್ರಹವಾದ ಕೊಬ್ಬು ಹೃದಯಾಘಾತಕ್ಕೆ ಕಾರಣವಾಗುತ್ತದೆ. ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.
ಇದು ರಕ್ತದ ಹರಿವಿನಲ್ಲಿ ಅಡಚಣೆಯನ್ನು ಉಂಟು ಮಾಡುತ್ತದೆ. ಇದರಿಂದ ಹೃದಯ ಸ್ನಾಯುಗೆ ಆಮ್ಲಜನಕ ಸಿಗುವುದಿಲ್ಲ. ಇದು ಸ್ನಾಯುಗಳು ಸಾಯುವಂತೆ ಮಾಡುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಮುನ್ಸೂಚನೆಗಳೇನು:
ತಲೆ ತಿರುಗುವಿಕೆ :
ತಲೆ ತಿರುಗುವಿಕೆ ಅಥವಾ ಹಗುರಾಗಿರುವಂತಹ ಭಾವನೆ ಯಾವುದೇ ಸ್ಪಷ್ಟ ಅಥವಾ ನಿರ್ದಿಷ್ಟ ಕಾರಣವಿಲ್ಲದೇ ತಲೆ ತಿರುಗುವ, ತೇಲಾಡುತ್ತಿರುವಂತಹ ಭಾವನೆ ಕಾಣಿಸಿಕೊಳ್ಳಬಹುದು. ಇದು ಕೂಡಾ ಹೃದಯಾಘಾತದ ಮುನ್ಸೂಚನೆಯಾಗಿದೆ.
ಉದ್ವೇಗ :
ಸಕಾರಣವಿಲ್ಲದೇ ಉದ್ವೇಗಕ್ಕೆ ಒಳಗಾಗುವುದು ಹಾಗೂ ಒಬ್ಬಂಟಿಯಾದ ಭಾವನೆಗಳನ್ನು ಪ್ರಕಟಿಸುವುದು ಕೂಡಾ ಹೃದಯಾಘಾತದ ಮುನ್ಸೂಚನೆ ಇರಬಹುದು.
ನಿದ್ರೆ ಬರದಿರುವುದು :
ನಿದ್ದೆ ಸರಿಯಾಗಿ ಬಾರದಿರುವುದು, ತಡೆ ತಡೆದು ಬರುವುದು ಅಥವಾ ನಿದ್ದೆ ಬಂದಿದ್ದರೂ ಕೊಂಚ ಹೊತ್ತಿಗೇ ಎಚ್ಚರಾಗುವುದು ಮೊದಲಾದವು ಹೃದಯಾಘಾತದ ಮುನ್ಸೂಚನೆಗಳಾಗಿವೆ.
ಸುಸ್ತು :
ಹೃದಯಾಘಾತದ ಪ್ರಾರಂಭಿಕ ಅಥವಾ ಕಡೆಯ ಹಂತದಲ್ಲಿ ಅಸಾಮಾನ್ಯವಾದ ಸುಸ್ತು ಕಾಣಿಸಿಕೊಳ್ಳಬಹುದು. ಇದುವರೆಗೂ ಮಾಡಿಕೊಂಡು ಬಂದಿದ್ದ ಸರಳ ಕೆಲಸಗಳನ್ನು ಈಗ ಮಾಡಿದ ಬಳಿಕ ಥಟ್ಟನೇ ಸುಸ್ತು ಆವರಿಸಬಹುದು.
ಎದೆಯ ಭಾಗದಲ್ಲಿ ನೋವು :
ಎದೆಯ ನಡುಭಾಗ ಅಥವಾ ಎಡಭಾಗದಲ್ಲಿ ಭಾರ ಇದ್ದ ಹಾಗೆ, ಕಿವುಚಿದ ಹಾಗೆ ಅಥವಾ ಒಳಗೆ ತುಂಬಿಕೊಂಡ ಹಾಗೆ ಇರುತ್ತದೆ ಎಂದು ರೋಗಿಗಳು ವಿವರಿಸಬಹುದು. ಈ ಅನುಭವ ಕೆಲವು ನಿಮಿಷಗಳವರೆಗೆ ಮಾತ್ರವೇ ಇದ್ದು ನಂತರ ಸಾಮಾನ್ಯವಾಗುತ್ತದೆ. ಕೆಲವೊಮ್ಮೆ ಒಂದೆರಡು ಬಾರಿ ಹೀಗೆ ಬಂದೂ ಹೋಗಬಹುದು.
ಅಜೀರ್ಣತೆ, ವಾಕರಿಕೆ ಅಥವಾ ಹಸಿವಿಲ್ಲದಿರುವಿಕೆ :
ಈ ಲಕ್ಷಣಗಳು, ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬಂದಾಗ, ಇದನ್ನು ಹೊಟ್ಟೆಯ ಹುಣ್ಣು ಅಥವ ಎದೆಯುರಿಯ ಕಾರಣದಿಂದ ಬಂದಿರಬಹುದು ಎಂದು ತಪ್ಪಾಗಿ ಅರ್ಥೈಸಿಕೊಳ್ಳುವರು.