ಡೈಲಿ ವಾರ್ತೆ: 10 ಡಿಸೆಂಬರ್ 2022

ಕ್ರೀಡೆಫಿಫಾ 2022: ಕಾಮನಬಿಲ್ಲು ಟಿ-ಶರ್ಟ್‌ ಧರಿಸಿ ಸ್ಟೇಡಿಯಂನಿಂದ ಹೊರಹಾಕಲ್ಪಟ್ಟ ಪತ್ರಕರ್ತ ಮೈದಾನದಲ್ಲಿ ಕುಸಿದು ಬಿದ್ದು ಸಾವು!

ನವದೆಹಲಿ: ಫಿಫಾ ವರ್ಲ್ಡ್‌ ಕಪ್‌ ಆರಂಭದಲ್ಲಿ ಪಂದ್ಯವೊಂದಕ್ಕೆ ಕಾಮನಬಿಲ್ಲು ಟಿ-ಶರ್ಟ್‌ ಧರಿಸಿಕೊಂಡು ಬಂದು ಸಿಬ್ಬಂದಿಗಳಿಂದ ಪ್ರವೇಶಕ್ಕೆ ತಡೆಯಾದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಫುಟ್‌ ಬಾಲ್‌ ಪಂದ್ಯ ನಡೆಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ತನ್ನದೇ ವೆಬ್‌ಸೈಟ್ ಹೊಂದಿದ್ದ ಮಾಜಿ ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಪತ್ರಕರ್ತ ಗ್ರಾಂಟ್ ವಾಲ್ ಅವರನ್ನು ಅಲ್ ರಯಾನ್‌ ನಲ್ಲಿರುವ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೇಲ್ಸ್ ವಿರುದ್ಧದ ಅಮೆರಿಕ ಪಂದ್ಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆ ಬಳಿಕ ಅವರನ್ನು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದರು.


ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿರುವ ದೇಶದಲ್ಲಿ ಎಲ್‌ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಶರ್ಟ್ ಧರಿಸಿ ಕತಾರ್‌ ನ ವಿಶ್ವಕಪ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವರು ಯತ್ನಿಸಿದ್ದರು.

ಶುಕ್ರವಾರದ ಅರ್ಜೆಂಟೀನ ಹಾಗೂ ನೆದರ್ಲೆಂಡ್ಸ್‌ ನಡುವಣ ಕ್ವಾರ್ಟರ್‌ ಫೈನಲ್‌ ಪಂದ್ಯದ ವರದಿ ಮಾಡುವ ವೇಳೆ ಗ್ರಾಂಟ್ ವಾಲ್ (48) ಕುಸಿದು ಬಿದ್ದು ಮೃತ ಪಟ್ಟಿದ್ದಾರೆ ಎಂದು ಗ್ರಾಂಟ್‌ ಸಹೋದರ ಎರಿಕ್ ವಾಲ್ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಎರಿಕ್‌ “ನನ್ನ ಹೆಸರು ಎರಿಕ್‌ ನಾನು, ಗ್ರಾಂಟ್‌ ವಾಲ್‌ ಅವರ ಸಹೋದರ, ನಾನೊಬ್ಬ ಗೇ. ನನ್ನ ಅಣ್ಣ ಕಾಮನಬಿಲ್ಲು ಟಿ- ಶರ್ಟ್‌ ಧರಿಸಿಕೊಂಡು ಹೋಗಲು ನಾನು ಕಾರಣ. ನನ್ನ ಅಣ್ಣ ಆರೋಗ್ಯದಿಂದ ಇದ್ದರು. ನನಗೆ ಅವರು, ಆತನಿಗೆ ಜೀವ ಬೆದರಿಕೆಯೆಂದು ಹೇಳುತ್ತಿದ್ದರು. ನನ್ನ ಅಣ್ಣ ಹಾಗೆಯೇ ನಿಧನರಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಯಾರೋ ನನ್ನ ಅಣ್ಣನ ಪ್ರಾಣಕ್ಕೆ ಕುತ್ತು ತಂದಿದ್ದಾರೆ . ಇದರಲ್ಲಿ ಸರ್ಕಾರದ ಕೈವಾಡವೂ ಇರಬಹುದೆಂದು” ಎರಿಕ್‌ ಆರೋಪಿಸಿದ್ದಾರೆ.

ಮೈದಾನದಲ್ಲಿ ಕುಸಿದು ಬಿದ್ದ ಗ್ರಾಂಟ್‌ ಅವರನ್ನು ಸಿಪಿಆರ್‌ ನೀಡಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆಗ ಅವರು ನಿಧನರಾಗಿದ್ದಾರೆಂದು ಖಾತ್ರಿಯಾಗಿದೆ ವರದಿ ತಿಳಿಸಿದೆ