ಡೈಲಿ ವಾರ್ತೆ: 10 ಡಿಸೆಂಬರ್ 2022

100ಕ್ಕೂ ಹೆಚ್ಚು ಯುವಕರಿಂದ ಮನೆಗೆ ನುಗ್ಗಿ ಯುವತಿ ಅಪಹರಣ: ಕುಟುಂಬ ಸದಸ್ಯರ ಮೇಲೆ ಹಲ್ಲೆ!

ಹೈದರಾಬಾದ್‌: ನೂರಕ್ಕೂ ಹೆಚ್ಚು ಜನರಿದ್ದ ಯುವಕರ ಗುಂಪೊಂದು 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದಲೇ ಅಪಹರಣ ಮಾಡಿದೆ. ಈ ಘಟನೆಯು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾ ಪ್ರದೇಶದಲ್ಲಿ ನಡೆದಿದೆ.

ಯುವತಿಯ ಮನೆಗೆ ನುಗ್ಗಿದ ಯುವಕರ ಗುಂಪು, ಆಕೆಯ ಕುಟುಂಬ ಸದಸ್ಯರಿಗೆ ಥಳಿಸಿದೆ. ಮನೆಯನ್ನು ಧ್ವಂಸ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಈ ಭಯಾನಕ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಪುಂಡ ಯುವಕರು ಕೋಲು, ದೊಣ್ಣೆ, ಮಾರಕಾಸ್ತ್ರಗಳನ್ನು ಹಿಡಿದು ಯುವತಿಯ ಮನೆಗೆ ನುಗ್ಗಿದ್ದಾರೆ. ಅಲ್ಲಿದ್ದ ಕಾರನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಸುಮಾರು 100 ಯುವಕರು ಮನೆಗೆ ನುಗ್ಗಿ ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಯುವತಿಯನ್ನು 24 ವರ್ಷದ ವೈಶಾಲಿ ಎಂದು ಗುರುತಿಸಲಾಗಿದ್ದು, ಆಕೆ ವೈದ್ಯೆಯಾಗಿದ್ದಾರೆ. ‘ಸಂತ್ರಸ್ತೆಯನ್ನು ಅಪಹರಿಸಿದ ನಂತರ ಆಕೆಯನ್ನು ಆರೋಪಿಗಳು ಥಳಿಸಿ ಬೆದರಿಕೆ ಹಾಕಿದ್ದಾರೆ’ ಎಂದು ರಾಚಕೊಂಡ ಪೊಲೀಸರು ‘ಟೈಮ್ಸ್ ನೌ’ಗೆ ತಿಳಿಸಿದ್ದಾರೆ.

‘ಇದು ಪೂರ್ವ ನಿಯೋಜಿತ ಅಪಹರಣವಾಗಿದೆ. ಸಂತ್ರಸ್ತೆಯನ್ನು ರಕ್ಷಿಸಲಾಗಿದ್ದು, ಆಕೆ ಆಘಾತಕ್ಕೊಳಗಾಗಿದ್ದಾರೆ. ಆಕೆಗೆ ಏನನ್ನೂ ಮಾತನಾಡಲು ಸಾಧ್ಯವಾಗಿಲ್ಲ. ಮುಖ್ಯ ಆರೋಪಿ ನವೀನ್ ಇನ್ನೂ ತಲೆಮರೆಸಿಕೊಂಡಿದ್ದಾನೆ’ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇತರರಿಗಾಗಿ ಶೋಧ ನಡೆಯುತ್ತಿದೆ.

‘ನಾವು ಆರೋಪಿಗಳ ವಿರುದ್ಧ 307 ಐಪಿಸಿ ಸೇರಿದಂತೆ ಗಂಭೀರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ರಾಚಕೊಂಡ ಹೆಚ್ಚುವರಿ ಸಿಪಿ, ಸುಧೀರ್ ಬಾಬು ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದು ಕೇವಲ ಅಪಹರಣ ಪ್ರಕರಣ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ಯುವತಿಯನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತವಾಗಿ ಹೇಳಲಾಯಿತು. ಆಕೆ ತನ್ನ ಮಲಗುವ ಕೋಣೆಯಿಂದ ಹೊರಬಂದು ಯುವಕರು ತಂದಿದ್ದ ಕಾರಿನಲ್ಲಿ ಕುಳಿತಳು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಸ್ಪಂದಿಸಿಲ್ಲ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

‘ಆಕೆಯ ಒಪ್ಪಿಗೆಯಿಲ್ಲದೆ, ಆಕೆಯನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿದರು. ಯುವಕರು ಆಕೆಯನ್ನು ಕರೆದೊಯ್ದರು. ಪೊಲೀಸರು ಏನೂ ಮಾಡಲಿಲ್ಲ. ನನ್ನ ಮಗಳಿಗೆ ಬಲವಂತ ಮಾಡಿದ್ದು ಅನ್ಯಾಯ. ಇದು ಪಾಪಿಗಳ ಕೃತ್ಯ. ಅವರು ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ನಮಗೆ ಸಂಪೂರ್ಣವಾಗಿ ಅನ್ಯಾಯವಾಗಿದೆ’ ಎಂದು ಮಹಿಳೆಯ ತಾಯಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.