ಡೈಲಿ ವಾರ್ತೆ: 12 ಡಿಸೆಂಬರ್ 2022

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವಳಿ ಮಕ್ಕಳ ಚಿಕಿತ್ಸೆಗೆ ಕೋಟದ ಜೀವನ್ ಮಿತ್ರ ಟ್ರಸ್ಟ್ ಯಿಂದ ನೆರವಿನ ಹಸ್ತ

ಕೋಟ : ಉಸಿರಾಟದ ಸಮಸ್ಯೆ ಯಿಂದ ಬಳಲುತ್ತಿದ್ದ ಅವಳಿ ಮಕ್ಕಳ ಚಿಕಿತ್ಸೆಗೆ ಕೋಟದ ಜೀವನ್ ಮಿತ್ರ ಟ್ರಸ್ಟ್ ನೆರವಿನ ಹಸ್ತ ಚಾಚಿದೆ.

ಐರೋಡಿ ಗ್ರಾಮದ ಪಾಪಣ್ಣ ಹಾಗೂ ಪುಷ್ಪಲತಾ ದಂಪತಿಯ ಅವಳಿ ಮಕ್ಕಳು ತೀವ್ರವಾದ ಅನಾರೋಗ್ಯದಿಂದ ಕಷ್ಟಪಡುತ್ತಿದ್ದು, ಹೆತ್ತವರು ವೈದ್ಯಕೀಯ ವೆಚ್ಚ ಭರಿಸಲಾಗದೆ ಕಂಗೆಟ್ಟಿದ್ದರು. ಇವರ ಕಷ್ಟಕ್ಕೆ ಸ್ಪಂದಿಸಿದ ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್ ಐತಿಹಾಸಿಕ ಕೋಟೇಶ್ವರದ ಕೊಡಿಹಬ್ಬದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನೆರವು ಒದಗಿಸಿದೆ.
ಮಕ್ಕಳ ಚಿಕಿತ್ಸಾ ವೆಚ್ಚಕ್ಕಾಗಿ ಸುಮಾರು 71 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ನೆರವು ನೀಡಿ ಮಾನವೀಯತೆ ಮೆರೆದಿದೆ.

ಸಂಗ್ರಹಗೊಂಡ ಮೊತ್ತವನ್ನು ಶನಿವಾರ ಕೋಟ ಅಮೃತೇಶ್ವರಿ ದೇವಳದಲ್ಲಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಅವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಟ್ರಸ್ಟಿ ಸುಬ್ರಾಯ ಆಚಾರ್ಯ, ಜೀವನ್ ಮಿತ್ರ ಸೇವಾ ಟ್ರಸ್ಟಿನ ಮುಖ್ಯಸ್ಥ ನಾಗರಾಜ ಪುತ್ರನ್, ನಾಗೇಂದ್ರ ಪುತ್ರನ್, ಭರತ್ ಗಾಣಿಗ, ವಸಂತ ಸುವರ್ಣ, ಜಗನ್ನಾಥ ತೊಡ್ಕಟ್, ರಾಘವೇಂದ್ರ ಮುದ್ದ, ಸಾಗರ್ ಪೂಜಾರಿ, ಪ್ರದೀಪ್ ಪಡುಕೆರೆ, ಸಂದೀಪ ಅಮೀನ್ ಕುರಾಡಿ, ಸುದರ್ಶನ್, ಕಿರಣ್ ಪುತ್ರನ್, ಅರುಣ್ ಶೃಂಗೇರಿ, ದೇವಳದ ಅರ್ಚಕ ಸುಬ್ರಾಯ ಜೋಗಿ ಉಪಸ್ಥಿತರಿದ್ದರು.

ಟ್ರಸ್ಟ್ ನ ಮಾನವೀಯ ಮಿಡಿತದ ಕರೆಗೆ ಸ್ಪಂದಿಸಿ ಉದಾರ ದೇಣಿಗೆ ನೀಡಿದ ಸಹೃದಯ ದಾನಿಗಳಿಗೆ ತುಂಬು ಕೃತಜ್ಞತೆ ಸಲ್ಲಿಸಿದ ಟ್ರಸ್ಟ್, ಅವಳಿ ಮಕ್ಕಳು ಶೀಘ್ರ ಆರೋಗ್ಯ ಹೊಂದಲಿ ಎಂದು ಹಾರೈಸಿದೆ.