ಡೈಲಿ ವಾರ್ತೆ: 12 ಡಿಸೆಂಬರ್ 2022

ಗೋವಾದ ಮೋಪಾ ವಿಮಾನ ನಿಲ್ದಾಣಕ್ಕೆ ‘ಮನೋಹರ್’ಎಂದು ಹೆಸರಿಟ್ಟ ಪ್ರಧಾನಿ ಮೋದಿ

ಪಣಜಿ: ಗೋವಾದಲ್ಲಿ ನೂತನವಾಗಿ ನಿರ್ಮಿಸಲಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದು ‘ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋವಾ’ ಎಂದು ನಾಮಕರಣ ಮಾಡಲಾಗಿದೆ.

ಹೊಸ ವಿಮಾನ ನಿಲ್ದಾಣದಿಂದಾಗಿ ಜಗತ್ತಿನೊಂದಿಗೆ ಗೋವಾದ ಸಂಪರ್ಕ ಹೆಚ್ಚಲಿದೆ. ಇದರಿಂದ ಗೋವಾದ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ನಿಲ್ದಾಣದ ಉದ್ಘಾಟನೆಯ ನಂತರ, ನರೇಂದ್ರ ಮೋದಿ ಅವರು ಗೋವಾದ ಜನತೆಗಾಗಿ ಕೊಂಕಣಿಯಲ್ಲಿ ಟ್ವೀಟ್ ಮಾಡಿದ್ದು ವಿಶೇಷವಾಗಿತ್ತು. “ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗೋವಾದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಇದು ಗೋವಾದ ಪ್ರಗತಿಗೆ ಮನೋಹರ್ ಪರಿಕ್ಕರ್ ಅವರ ಪ್ರಯತ್ನಗಳಿಗೆ ಗೌರವವಾಗಿದೆ.” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೊಂಕಣಿಯಿಂದ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.. “ಗೋಯಾಂತ್ ಯೇವನ್ ಮಕಾ ಖೂಬ್ ಖೋಸ್ ಭೋಗ್ತಾ” ಎಂಬ ಮಾತಿನಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

ಮೋಪಾ ವಿಮಾನ ನಿಲ್ದಾಣಕ್ಕೆ 2,870 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, 2,132 ಎಕರೆ ಪ್ರದೇಶದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಸ್ವತಃ ಪ್ರಧಾನಿ ಮೋದಿ 2016 ರಲ್ಲಿ ನೆರವೇರಿಸಿದ್ದರು. ಆ ಬಳಿಕ ಭಾನುವಾರ ಸ್ವತಃ ಮೋದಿ ಅವರೇ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಜನವರಿ 5, 2023 ರಿಂದ ವಿಮಾನ ನಿಲ್ದಾಣದಿಂದ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ.