ಡೈಲಿ ವಾರ್ತೆ: 16 ಡಿಸೆಂಬರ್ 2022

ಚಾಮರಾಜನಗರ: ಗಾಂಜಾ, ನಾಡ ಬಂದೂಕು, ಜಿಂಕೆ ಮಾಂಸ, ಪ್ರಾಣಿಗಳ ಉಗುರು ಸಹಿತ ವ್ಯಕ್ತಿ ಬಂಧನ

ಗುಂಡ್ಲುಪೇಟೆ : ಮನೆಯಲ್ಲಿ ಗಾಂಜಾ ಬೆಳೆದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸೆನ್ ಹಾಗೂ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ನಾಡ ಬಂದೂಕು, ಜಿಂಕೆ ಮಾಂಸ, ವನ್ಯ ಪ್ರಾಣಿಗಳ ಉಗುರು ಹಾಗೂ ಸಿಡಿಮದ್ದು ಗುಂಡುಗಳು ಪತ್ತೆಯಾಗಿರುವ ಘಟನೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.

ಅಣ್ಣೂರುಕೇರಿ ಗ್ರಾಮದ ಶಿವನಾಗಶೆಟ್ಟಿ(34) ಬಂಧಿತ ಆರೋಪಿಯಾಗಿದ್ಧಾನೆ. ಗಾಂಜಾ ಗಿಡವನ್ನು ಮನೆಯಲ್ಲಿ ಬೆಳೆದಿದ್ದ ಮಾಹಿತಿ ಅರಿತ ಚಾಮರಾಜನಗರ ಸೈಬರ್ ಕ್ರೈಂ ಆರಕ್ಷಕ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ಗುಂಡ್ಲುಪೇಟೆ ಬಫರ್ ಜೋನ್ ವಲಯದ ವಲಯ ಅರಣ್ಯಾಧಿಕಾರಿಗಳು ಜಂಟಿಯಾಗಿ ದಿಢೀರ್ ದಾಳಿ ನಡೆಸಿದ ವೇಳೆ ಮನೆ ಒಳಗೆ 5 ಗಾಂಜಾದ ಗಿಡ ಬೆಳೆಸಿರುವುದು ಕಂಡು ಬಂದಿದೆ. ನಂತರ ಮನೆ ಪರಿಶೀಲಿಸಿದಾಗ 5 ಕೆ.ಜಿಯಷ್ಟು ಜಿಂಕೆ ಮಾಂಸ, ಬೇಟೆಗಾಗಿ ಬಳಸಿದ್ದ ನಾಡ ಬಂದೂಕು, ಕರಡಿಯ 5 ಉಗುರುಗಳು ಹಾಗೂ ಕಾಡು ಬೆಕ್ಕಿನ 21 ಉಗುರುಗಳು, 30 ಸಿಡಿಮದ್ದು ಗುಂಡುಗಳು ಹಾಗೂ 300 ಗ್ರಾಂನಷ್ಟು ಸಲ್ಫರ್ ಪುಡಿ, ಬಿಳಿ ಉಪ್ಪು ಮತ್ತು 2 ಬಂಡಲ್ ವೈರ್ ಗಳು ಪತ್ತೆಯಾಗಿದೆ.

ವಾರದಲ್ಲಿ ಎರಡು ಬಾರಿ ಗುಂಡ್ಲುಪೇಟೆ ತಾಲೂಕಿನ ಹಳೆಪುರ ಗ್ರಾಮದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವುದಾಗಿ ಬಂಧಿತ ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಅಣ್ಣೂರುಕೇರಿ ಗ್ರಾಮದ ಬೆಳ್ಳಶೆಟ್ಟಿ ಹಾಗೂ ಕರಿಯಶೆಟ್ಟಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಬಂಧಿತ ಶಿವನಾಗಶೆಟ್ಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾದವರ ಬಂಧನಕ್ಕೆ ಬಲೆ ಬೀಸಲಾಗಿದೆ.