ಡೈಲಿ ವಾರ್ತೆ: 16 ಡಿಸೆಂಬರ್ 2022

ವಿದ್ಯಾರ್ಥಿನಿಯನ್ನು ಶಾಲೆಯ ಮಹಡಿಯಿಂದ ಎಸೆದ ಶಿಕ್ಷಕಿ: ಸರಕಾರಿ ಶಾಲೆಯಲ್ಲಿ ನಡೆದ ಅಮಾನವೀಯ ಘಟನೆ

ನವದೆಹಲಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಿಯೊಬ್ಬರು ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಶಾಲೆಯ ಮೊದಲನೆಯ ಅಂತಸ್ತಿನಿಂದ ಎಸೆದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಘಟನೆಯಲ್ಲಿ ಬಾಲಕಿ ವಂದನಾ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ನಗರ ನಿಗಮ ಬಾಲಿಕಾ ವಿದ್ಯಾಲಯ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಶಿಕ್ಷಕಿ ಗೀತಾ, ಬಾಲಕಿಗೆ ಕತ್ತರಿಯಿಂದ ಹಲ್ಲೆ ನಡೆಸಿ ಬಳಿಕ ಶಾಲೆಯ ಮೊದಲನೆಯ ಅಂತಸ್ತಿನಿಂದ ಎಸೆದಿದ್ದಾರೆ‌.

ಮೊದಲನೆ ಅಂತಸ್ತಿನಿಂದ ಮಗು ಕೆಳಗೆ ಬೀಳುತ್ತಿದ್ದಂತೆ ದಾರಿಹೋಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಬಾರಾ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತ್ಯಕ್ಷದರ್ಶಿಯ ಹೇಳಿಕೆಯ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತೆ ಶ್ವೇತಾ ಚೌಹಾಣ್ ಹೇಳಿದ್ದಾರೆ.

ವಿದ್ಯಾರ್ಥಿಯನ್ನು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲಾ ಅಗತ್ಯ ಪರೀಕ್ಷೆಗಳನ್ನು ಮಾಡಲಾಗಿದೆ, ಮಗು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಸಿಡಿ ಕೂಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಇಲಾಖೆಯಿಂದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಂಸಿಡಿ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.