ಡೈಲಿ ವಾರ್ತೆ: 29 ಡಿಸೆಂಬರ್ 2022

ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ!

ಚಿಕ್ಕಮಗಳೂರು: ಮೀಸಲು ಅರಣ್ಯಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಸೋಮನಕಾಡು ಅರಣ್ಯದಲ್ಲಿ ನಡೆದಿದೆ.

ಚಿಕ್ಕಮಗಳೂರು – ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಪ್ರಕೃತಿ ಸೌಂದರ್ಯದ ನೆಲೆಬೀಡು. ಮುಗಿಲೆತ್ತರದ ಬೆಟ್ಟ-ಗುಡ್ಡಗಳು ನೋಡುಗರನ್ನು ಕೈಬಿಸಿ ಕರೆಯುತ್ತಿವೆ. ಆದರೆ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಸೋಮನಕಾಡು ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಕೊಟ್ಟಿದ್ದು ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ

ದಟ್ಟಕಾನನವಾದ ಕಾರಣ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ನೂರಾರು ಜಾತಿಯ ಸಾವಿರಾರು ಮರಗಿಡಗಳು, ಪ್ರಾಣಿ-ಪಕ್ಷಿಗಳು ಕೂಡಾ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಹತ್ತಾರು ಅರಣ್ಯ ಅಧಿಕಾರಿಗಳ ನಿರಂತರ ಶ್ರಮದಿಂದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ. ಉಪವಲಯ ಅರಣ್ಯ ಅಧಿಕಾರಿ ಬಸವರಾಜು, ಅರಣ್ಯ ರಕ್ಷಕ ಪರಮೇಶ್, ಅರಣ್ಯ ವೀಕ್ಷಕ ದಿನೇಶ್ ಸೇರಿದಂತೆ ಹತ್ತಾರು ಅರಣ್ಯ ಇಲಾಖೆ ನೌಕರರು ಬೆಂಕಿಯನ್ನು ನಂದಿಸಿದ್ದಾರೆ.
ಕಾಡನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡರು ಕೂಡಾ ಕೆಲ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಕೊಡುತ್ತಿರುವುದರಿಂದ ಅಪರೂಪದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಕಾಡಿನ ಮಹತ್ವದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲ ಮೂಢನಂಬಿಕೆಗಳಿಗೆ ದಾಸರಾಗಿರುವ ಜನರು ಕಾಡು ಹುಲುಸಾಗಿ ಬೆಳೆಯಲಿ, ದನಕರುಗಳಿಗೆ ಮೇವು ಸಿಗಲೆಂದು ಬೇಕೆಂದೇ ಬೆಂಕಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಚಾರ್ಮಾಡಿ ಅಪರೂಪದ ಸಸ್ಯ ಸಂಪತ್ತಿನ ಬೆಟ್ಟ. ಮಳೆಗಾಲದಲ್ಲಿ ಹಚ್ಚಹಸುರಿನಿಂದ ಕಂಗೊಳಿಸುವ ಇಲ್ಲಿನ ಬೆಟ್ಟಗುಡ್ಡಗಳು ಬೇಸಿಗೆಯಲ್ಲಿ ಒಣಗಿ ನಿಂತಿರುತ್ತದೆ. ಈ ಮಾರ್ಗದಲ್ಲಿ ಓಡಾಡುವ ಕೆಲ ಪ್ರವಾಸಿಗರು ಸಿಗರೇಟ್ ಸೇದಿ ಎಸೆಯುವ ಕಿಡಿಯಿಂದ ಬೆಂಕಿ ಹತ್ತಿರುವ ಉದಾಹರಣೆಗಳೂ ಇವೆ. ಹೀಗಾಗಿ ಕಾಡನ್ನು ಉಳಿಸಿ-ಬೆಳೆಸುವುದು ಎಲ್ಲರ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ.