ಡೈಲಿ ವಾರ್ತೆ: 29 ಡಿಸೆಂಬರ್ 2022

ಉಡುಪಿ: ಠೇವಣಿದಾರರಿಗೆ ನೂರಾರು ಕೋಟಿ ಪಂಗನಾಮ ಪ್ರಕರಣ: ಕಮಾಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷನ ಬಂಧನ


ಉಡುಪಿ: ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಬಹುಕೋಟಿ ರೂ. ಹಗರಣ ಪ್ರಕರಣದ ಪ್ರಮುಖ ರೂವಾರಿಯೆನ್ನಲಾದ ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀ ನಾರಾಯಣ ಉಪಾಧ್ಯಾಯರನ್ನು ಸೆನ್ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಬಿ.ವಿ.ಲಕ್ಷ್ಮೀನಾರಾಯಣ ಜಿಲ್ಲೆಯ ಜನರಿಗೆ ಠೇವಣಿಗಳಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಂತರ ರೂ. ಸಂಗ್ರಹಿಸಿ ಹಿಂದಿರುಗಿಸದೆ ವಂಚಿಸಿರುವ ಆರೋಪದ ಮೇಲೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಸೆನ್ ಪೊಲೀಸರು ಬಿ.ವಿ ಲಕ್ಷ್ಮೀನಾರಾಯಣರನ್ನು ಬ್ರಹ್ಮಾವರದ ಮಟಪಾಡಿ ಎಂಬಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲೆಯ ವಿವಿಧ ಸಹಕಾರಿ ಸಂಘ, ಕೋ ಆಪರೇಟಿವ್ ಸೊಸೈಟಿ, ನಿವೃತ್ತ ಉದ್ಯೋಗಿಗಳು, ಉಡುಪಿಯ ಮಠಾಧೀಶರು ಸಹಿತ ನೂರಾರು ಮಂದಿ ಕೋಟ್ಯಂತರ ರೂ.ವನ್ನು ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಠೇವಣಿ ಇರಿಸಿದ್ದರು. ಇದೀಗ ಹಣ ಹಿಂದಿರುಗಿಸಿದೆ ವಂಚಿಸಿದ್ದರಿಂದ ಠೇವಣಿದಾರರು ದೂರ ನೀಡಿದ್ದಾರೆ.