ಡೈಲಿ ವಾರ್ತೆ:22 ಜನವರಿ 2023

ಪ್ರಜಾಧ್ವನಿ ಯಾತ್ರೆ : “ಕೋಲಾರದಿಂದಲೇ ಸ್ಪರ್ಧಿಸುತ್ತೇನೆ” : ಸಿದ್ದರಾಮಯ್ಯ

ಉಡುಪಿ: ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ, ಹೈಕಮಾಂಡ್ ಏನು ಹೇಳುತ್ತಾರೆ, ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಉಡುಪಿಯಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳ ಬಗ್ಗೆ ನಂಬಿಕೆ ಇಲ್ಲ. ಲವ್ ಜಿಹಾದ್ ಅವರ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ, ರಸ್ತೆ ಚರಂಡಿ, ಬಡವರ ಕಾರ್ಯಕ್ರಮಗಳು, ಅಭಿವೃದ್ದಿ ಬಗ್ಗೆ ಮಾತನಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪಕ್ಷದವರಿಗೆ ಫರ್ಮಾನು ಹೊರಡಿಸಿದ್ದಾರೆ. ಅವರ ಮನಸ್ಸಿನಲ್ಲಿ ಏನು ಇದೆ ಎಂಬುದನ್ನು ಬಾಯಿ ಬಿಟ್ಟೆ ಹೇಳಿದ್ದಾರೆ. ಇವರಿಂದ ಕರಾವಳಿ ಸೇರಿದಂತೆ ಕರ್ನಾಟಕ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.

ದೇಶದ ಪ್ರಧಾನಿಯಾಗಿ ಮೋದಿ ರಾಜ್ಯಕ್ಕೆ ಬರಬಹುದೇ ಹೊರತು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆಂದು ಬಂದರೆ ಅದು ಅಸಾಧ್ಯದ ಮಾತು. 100 ಬಾರಿ ಕರ್ನಾಟಕಕ್ಕೆ ಅವರು ಬಂದು ಹೋದರೂ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಸಾಧ್ಯವಿಲ್ಲ. ಬಿಜೆಪಿ ಮೇಲೆ ರಾಜ್ಯದ ಜನ ಭ್ರಮನಿರಸನಗೊಂಡಿದ್ದಾರೆ ಎಂದರು.

ಅಮಿತ್ ಶಾ ಹಲವು ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಅವರಿಂದ ಸಾಧ್ಯವಾಯಿತೇ? ಕರ್ನಾಟಕಕ್ಕೆ ಬಂದರೂ ಅವರಿಗೆ ಅದೇ ಗತಿಯಾಗುತ್ತದೆ ಎಂದವರು ಹೇಳಿದರು.

ರಾಜ್ಯದಲ್ಲಿ ಕನಿಷ್ಠ 130 ಕ್ಷೇತ್ರ ಗೆಲ್ಲುತ್ತೇವೆ, ಗರಿಷ್ಠ 150 ಗೆಲ್ಲುತ್ತೇವೆ ಎಂದರು. ಕರಾವಳಿಯ ಉಡುಪಿಯಲ್ಲಿ ಹೋದ ಸಲ ಗೆದ್ದಿರಲಿಲ್ಲ, ಈ ಬಾರಿ ಎರಡ್ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡದಲ್ಲಿ ಎಂಟು ಕ್ಷೇತ್ರ ಇದೆ, ಐದು ಆದರೂ ಗೆಲ್ಲುತ್ತೇವೆ. ಬಿಜೆಪಿಯವರು ಒಮ್ಮೆ ಗೆದ್ದರೆ ಅದೇ ಮತ್ತೆ ರಿಪೀಟ್ ಆಗುತ್ತಾ ಎಂದು ಪ್ರಶ್ನಿಸಿದರು.