ಡೈಲಿವಾರ್ತೆ:13/ಮಾರ್ಚ್/2026

ಉಡುಪಿ: ನಸುಕಿನ ವೇಳೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಹಳೆ ಕದೀಮ ಪೊಲೀಸ್ ವಶಕ್ಕೆ

​ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಅಡಗಿ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಉಡುಪಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ವ್ಯಕ್ತಿಯು ಈ ಹಿಂದೆ ಕಳವು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಹಳೆ ಅಪರಾಧಿ ಎಂದು ಗುರುತಿಸಲಾಗಿದೆ.

ದಿನಾಂಕ 13/03/2026 ರಂದು ನಸುಕಿನ ಜಾವ ಸುಮಾರು 03:45 ಗಂಟೆಗೆ ಉಡುಪಿ ನಗರ ಠಾಣೆಯ ಎ.ಎಸ್.ಐ ಹರೀಶ್ ಅವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ, ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಕತ್ತಲೆಯಲ್ಲಿ ವ್ಯಕ್ತಿಯೊಬ್ಬ ಅವಿತು ಕುಳಿತಿರುವ ಮಾಹಿತಿ ಲಭಿಸಿತ್ತು. ಕೂಡಲೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರನ್ನು ಕಂಡ ಆತ ಓಡಿಹೋಗಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆ ಆತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊರಡಿಹಿತ್ತಲ್ಲಾ ಗ್ರಾಮದ ನಿವಾಸಿ ಪ್ರಶಾಂತ ಕೆ.ವಿ ಅಲಿಯಾಸ್ ಕುಟ್ಟಿ (35) ಎಂದು ತಿಳಿದುಬಂದಿದೆ. ಆತನ ಬೆರಳಚ್ಚು (Fingerprint) ದಾಖಲೆಗಳನ್ನು ಪರಿಶೀಲಿಸಿದಾಗ, ಈತನ ಮೇಲೆ ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ (ಅಪರಾಧ ಕ್ರಮಾಂಕ: 17/2010, ಕಲಂ 379 ಐಪಿಸಿ) ದಾಖಲಾಗಿರುವುದು ಹಾಗೂ ಆತ ಸಜಾ ಬಂಧಿಯಾಗಿರುವುದು ಬೆಳಕಿಗೆ ಬಂದಿದೆ.

ಉಡುಪಿಯಲ್ಲಿ ಯಾವುದೇ ಸಂಬಂಧಿಕರು ಇಲ್ಲದಿದ್ದರೂ, ನಸುಕಿನ ಜಾವ ಕತ್ತಲೆಯಲ್ಲಿ ತನ್ನ ಗುರುತನ್ನು ಮರೆಮಾಚಿ ನಿಂತಿದ್ದ ಈತನು ಯಾವುದೋ ದೊಡ್ಡ ಅಪರಾಧ ಎಸಗುವ ಉದ್ದೇಶದಿಂದಲೇ ಹೊಂಚು ಹಾಕುತ್ತಿದ್ದ ಎನ್ನಲಾಗಿದೆ. ವಿಚಾರಣೆಯ ವೇಳೆ ಆತ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2026 ರಂತೆ, ಕರ್ನಾಟಕ ಪೊಲೀಸ್ ಕಾಯ್ದೆ (KP ACT) ಕಲಂ 96(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.