ಡೈಲಿವಾರ್ತೆ:13/ಮಾರ್ಚ್/2026

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ – ಟಿಪ್ಪರ್ ಸಹಿತ ಆರೋಪಿಗಳ ವಶ

​ಬ್ರಹ್ಮಾವರ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವೊಂದನ್ನು ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆ ಜಂಕ್ಷನ್ ಬಳಿ ನಡೆದಿದೆ.

ದಿನಾಂಕ 13.03.2026 ರಂದು ಬೆಳಿಗ್ಗೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಅಶೋಕ ಮಾಳಬಗಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸಾಯಿಬ್ರಕಟ್ಟೆ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಿದ್ಕಲ್‌ಕಟ್ಟೆ ಕಡೆಯಿಂದ ಬಾರ್ಕೂರು ಕಡೆಗೆ ಹೋಗುತ್ತಿದ್ದ KL-23-B-1041 ನೋಂದಣಿ ಸಂಖ್ಯೆಯ TATA ಕಂಪೆನಿಯ ಟಿಪ್ಪರ್ ವಾಹನವನ್ನು ತಡೆದು ತಪಾಸಣೆ ನಡೆಸಲಾಗಿ, ಅದರಲ್ಲಿ ಅಕ್ರಮವಾಗಿ ಮರಳು ತುಂಬಿರುವುದು ಕಂಡುಬಂದಿದೆ.

ವಾಹನ ಚಾಲಕ ಮಂಜುನಾಥ್ ಎಂಬವರನ್ನು ವಿಚಾರಿಸಿದಾಗ, ಮಾಲಕ ಶರಣ್ ಎಂಬವರ ಸೂಚನೆಯಂತೆ ಕುಂದಾಪುರದ ಹುಣ್ಸೆಮಕ್ಕಿ ಹಾಗೂ ಮೊಳಹಳ್ಳಿಯಿಂದ ಮರಳನ್ನು ಲೋಡ್ ಮಾಡಿಕೊಂಡು ಬ್ರಹ್ಮಾವರಕ್ಕೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಮರಳು ಸಾಗಾಟಕ್ಕೆ ಅಗತ್ಯವಿರುವ ಯಾವುದೇ ಅಧಿಕೃತ ಟ್ರಿಪ್ ಶೀಟ್ ಅಥವಾ ಪರವಾನಿಗೆ ಅವರ ಬಳಿ ಇರಲಿಲ್ಲ. ಈ ಮೂಲಕ ಸರ್ಕಾರದ ಸೊತ್ತಾದ ಮರಳನ್ನು ರಾಜಧನ ಪಾವತಿಸದೆ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ದೃಢಪಟ್ಟಿದೆ.

ಪೊಲೀಸರು ಸ್ಥಳದಲ್ಲೇ ಪಂಚನಾಮೆ ನಡೆಸಿ, ಅಂದಾಜು 6,000 ರೂ. ಮೌಲ್ಯದ 3 ಯೂನಿಟ್ ಮರಳು ಮತ್ತು ಸಾಗಾಟಕ್ಕೆ ಬಳಸಿದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.